5.6 ಲಕ್ಷ ಭಾರತೀಯರು ಶ್ರೀಮಂತ ದೇಶಗಳಿಗೆ ವಲಸೆ
ಸಾಂದರ್ಭಿಕ ಚಿತ್ರ PC: istockphoto.com
ಮುಂಬೈ: ಅಮೆರಿಕ, ಇಂಗ್ಲೆಂಡ್ ಮತ್ತು ಕೆನಡಾದಂಥ ದೇಶಗಳಿಗೆ ವಲಸೆ ಹೋಗುವ ಪ್ರವೃತ್ತಿ ಭಾರತೀಯರಲ್ಲಿ ಹೆಚ್ಚಿದ್ದು, 2022ರಲ್ಲಿ ಒಟ್ಟು 5.6 ಲಕ್ಷ ಮಂದಿ ಈ ಸಮೃದ್ಧ ದೇಶಗಳಿಗೆ ವಲಸೆ ಹೋಗಿದ್ದಾರೆ.
ಓಇಸಿಡಿ (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ) ದೇಶಗಳ ಹೊಸ ವಲಸೆಗಾರರಾಗಿ, ಅಂತರಾಷ್ಟ್ರೀಯ ವಿದ್ಯಾರ್ಥಿಗಳಾಗಿ, ಪೌರತ್ವ ಪಡೆದವರ ಪಟ್ಟಿಯಲ್ಲಿ ಭಾರತೀಯರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಆದರೆ ಈ ದೇಶಗಳು ಪ್ರಸ್ತುತ ಅನುಸರಿಸುತ್ತಿರುವ ರಕ್ಷಣಾತ್ಮಕ ನೀತಿಯಿಂದಾಗಿ ಈ ಮುಕ್ತ ಮಾರ್ಗ ಕಿರಿದಾಗುತ್ತಿದೆ. 2022ರಲ್ಲಿ 5.6 ಲಕ್ಷ ಮಂದಿ ಓಇಸಿಡಿ ದೇಶಗಳಿಗೆ ತೆರಳಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 35ರಷ್ಟು ಅಧಿಕ. ಓಇಸಿಡಿ ದೇಶಗಳ ವಲಸೆಗಾರರ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು, ಚೀನಾದಿಂದ 3.2 ಲಕ್ಷ ಮಂದಿ ವಲಸೆ ಬಂದಿದ್ದಾರೆ. ಒಇಸಿಡಿ ದೇಶಗಳ ಹೊಸ ವಲಸೆಗಾರರ ಪೈಕಿ ಭಾರತೀಯರ ಪಾಲು ಶೇಕಡ 6.4ರಷ್ಟಿದ್ದರೆ, ಚೀನಾ ಪಾಲು ಶೇಕಡ 3.8ರಷ್ಟು.
2.68 ಲಕ್ಷ ಮಂದಿಯೊಂದಿಗೆ ರಷ್ಯಾ ಮೂರನೇ ಸ್ಥಾನದಲ್ಲಿದೆ. ರಷ್ಯಾದಿಂದ ವಲಸೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಿದ್ದು, ಹಿಂದಿನ ವರ್ಷ ಒಟ್ಟು ವಲಸೆಗಾರರ ಪೈಕಿ ರಷ್ಯಾ 18ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ ರೊಮೇನಿಯಾವನ್ನು ಹಿಂದಕ್ಕೆ ತಳ್ಳಿ ಮೂರನೇ ಸ್ಥಾನಕ್ಕೇರಿದೆ.
ಪ್ಯಾರೀಸ್ ನಲ್ಲಿ ಗುರುವಾರ ಬಿಡುಗಡೆ ಮಾಡಲಾದ ಇಂಟರ್ ನ್ಯಾಷನಲ್ ಮೈಗ್ರೇಷನ್ ಔಟ್ ಲುಕ್-2024ನಲ್ಲಿ ಈ ಅಂಕಿ ಅಂಶಗಳ ವಿವರಗಳಿವೆ. 2022ರಲ್ಲಿ ಬ್ರಿಟನ್ 1.12 ಲಕ್ಷ ಭಾರತೀಯರನ್ನು ಬರ ಮಾಡಿಕೊಂಡಿದ್ದು, ಇದು 2021ರಲ್ಲಿ ಇದ್ದ ಪ್ರಮಾಣಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಅಮೆರಿಕಕ್ಕೆ 1.25 ಲಕ್ಷ ಭಾರತೀಯರು ವಲಸೆ ಹೋಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ವಲಸೆ ಪ್ರಮಾಣ ಶೇಕಡ 35ರಷ್ಟು ಹೆಚ್ಚಿದೆ. ಕೆನಡಾಕ್ಕೆ 1.18 ಲಕ್ಷ ಮಂದಿ ವಲಸೆ ಹೋಗಿದ್ದರೂ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 8ರಷ್ಟು ಕಡಿಮೆ.