ಪಕ್ಷಾಂತರ ಪರ್ವ: ಕೇಸರಿ ಪಕ್ಷ ಸೇರಿದ ಐದನೇ ಬಿಜೆಡಿ ಶಾಸಕ
Photo:ANI
ಭುವನೇಶ್ವರ: ಮುಂಬರುವ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿಯಿಂದ ಟಿಕೆಟ್ ವಂಚಿತರಾಗಿ ಗುರುವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಒಡಿಶಾ ಶಾಸಕ ರಮೇಶ್ ಚಂದ್ರ ಸಾಯಿ ಶುಕ್ರವಾರ ಬಿಜೆಪಿ ಸೇರಿದ್ದಾರೆ. ಈ ಮೂಲಕ ಚುನಾವಣೆ ಘೋಷಣೆ ಬಳಿಕ ನವೀನ್ ಪಟ್ನಾಯಕ್ ನೇತೃತ್ವದ ಪಕ್ಷದ ಐದನೇ ಶಾಸಕ ಪಕ್ಷಾಂತರ ಮಾಡಿದಂತಾಗಿದೆ.
ಇಬ್ಬರು ಸಂಸದರು ಕೂಡಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮಧ್ಯೆ ಕೇಸರಿ ಪಕ್ಷದಿಂದ ನೀಲಗಿರಿ ಶಾಸಕ ಸುಕಾಂತ್ ನಾಯಕ್, ಮಾಜಿ ಶಾಸಕರಾದ ಪ್ರಕಾಶ್ ಚಂದ್ರ ಬೆಹ್ರಾ ಮತ್ತು ಭುಗ್ರು ಬಕ್ಷಿಪಾತ್ರ ನಿಷ್ಠೆ ಬದಲಿಸಿ, ಬಿಜೆಡಿ ಸೇರಿದ್ದಾರೆ.
ಸಾಯಿ ಪ್ರತಿನಿಧಿಸುತ್ತಿದ್ದ ಅತಮಲ್ಲಿಕ್ ಕ್ಷೇತ್ರದಿಂದ ಮಾಜಿ ಉನ್ನತ ಅಧಿಕಾರಿ ನಳಿನಿ ಕಾಂತ ಅವರನ್ನು ಬಿಜೆಡಿ ಕಣಕ್ಕಿಳಿಸಿದೆ. ಬಿಜೆಡಿಗೆ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತಿರುವುದಾಗಿ ಸಾಯಿ ಘೋಷಿಸಿದ್ದರು. ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವ ಬೆಂಬಲಿಸಿ ಬಿಜೆಪಿ ಸೇರುತ್ತಿರುವುದಾಗಿ ಘೋಷಿಸಿದ್ದರು.
ಅತಮಲ್ಲಿಕ್ ಕ್ಷೇತ್ರದಿಂದ ಬಿಜೆಪಿ ಈಗಾಗಲೇ ಸಂಜೀಬ್ ಸಾಹೂ ಅವರನ್ನು ಕಣಕ್ಕೆ ಇಳಿಸಿದ್ದು, ಸಾಯಿ ಸೇರ್ಪಡೆಯಿಂದ ಸಂಬಲ್ಪುರ ಲೋಕಸಭಾ ಮತ್ತು ಅತಮಲ್ಲಿಕ್ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಬಲ ಬರಲಿದೆ ಎಂಬ ನಂಬಿಕೆ ಬಿಜೆಪಿಯದ್ದು. ನಾಲ್ಕು ಬಾರಿ ಬಿಜೆಡಿಯಿಂದ ಆಯ್ಕೆಯಾಗಿದ್ದ ಸಾಹೂ 2021ರಲ್ಲಿ ಬಿಜೆಪಿ ಸೇರಿದ್ದರು.
ಇದಕ್ಕೂ ಮುನ್ನ ಪಕ್ಷದಿಂದ ಉಚ್ಚಾಟನೆಯಾಗಿದ್ದ ಗೋಪಾಲಪುರ ಶಾಸಕ ಪ್ರದೀಪ್ ಪಾಣಿಗ್ರಾಹಿ ಬಿಜೆಪಿ ಸೇರಿದ್ದು, ಅವರನ್ನು ಬೆಹ್ರ್ರಾಂಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗಿದೆ. ಬಿಜೆಪಿ ಸೇರಿದ್ದ ಮತ್ತೊಬ್ಬ ಶಾಸಕ ಅರಬಿಂದ ಧಾಲಿ, 2019ರಲ್ಲಿ ಚುನಾಯಿತರಾಗಿದ್ದ ಜಯದೇವ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.