ಆರು ತಿಂಗಳ ಹಿಂದಷ್ಟೇ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಾಧನೆ, ಈಗ ಕನಿಷ್ಠ ಮಟ್ಟಕ್ಕೆ ಕುಸಿದ ಶರದ ಪವಾರ್ ಎನ್ಸಿಪಿ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ
ಶರದ್ ಪವಾರ್ | PC : NDTV
ಹೊಸದಿಲ್ಲಿ,: ಭಾರತೀಯ ರಾಜಕೀಯದಲ್ಲಿ ‘ಫೀನಿಕ್ಸ್’ನಂತೆ ಮತ್ತೆ ಪುಟಿದೇಳಬಲ್ಲ ನಾಯಕರಲ್ಲಿ ಓರ್ವರಾಗಿರುವ ಶರದ ಪವಾರ್ 2026ರಲ್ಲಿ ತನ್ನ ರಾಜ್ಯಸಭಾ ಸದಸ್ಯತ್ವ ಅಂತ್ಯಗೊಂಡ ಬಳಿಕ ಸಕ್ರಿಯ ರಾಜಕೀಯವನ್ನು ತೊರೆಯುವುದಾಗಿ ಈಗಾಗಲೇ ಸುಳಿವು ನೀಡಿದ್ದಾರೆ. 83ರ ಹರೆಯದ ಪವಾರ್ ತನ್ನ ಯೋಚನೆಯಂತೆ ನಡೆದುಕೊಂಡರೆ ನಿವೃತ್ತಿಗೆ ಮುನ್ನ ಅವರ ಕೊನೆಯ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯು ಅವರ ಉಜ್ವಲ ರಾಜಕೀಯ ವೃತ್ತಿಜೀವನದಲ್ಲಿ ಕಪ್ಪುಚುಕ್ಕೆಯಾಗಿ ಉಳಿದುಕೊಳ್ಳಲಿದೆ.
ಮತ ಎಣಿಕೆ ಶನಿವಾರ ಬೆಳಿಗ್ಗೆ ಆರಂಭಗೊಂಡಿದ್ದು, ಅಪರಾಹ್ನ ಎರಡು ಗಂಟೆಯ ವೇಳೆಗೆ ಶರದ ಪವಾರ್ ನೇತೃತ್ವದ ಎನ್ಸಿಪಿ ಬಣ 288 ಸ್ಥಾನಗಳ ಪೈಕಿ ಕೇವಲ 12ರಲ್ಲಿ ಮುಂದಿತ್ತು. ಅದು ಈ ಚುನಾವಣೆಯಲ್ಲಿ 87 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು,ಸ್ಟ್ರೈಕ್ ರೇಟ್ ಶೇ.13.79 ಆಗಿದೆ. ಇದು ಈ ಹಿರಿಯ ನಾಯಕನ ಅತ್ಯಂತ ಕಳಪೆ ಸಾಧನೆಯಾಗಿದೆ. ಕೇವಲ ಆರು ತಿಂಗಳ ಹಿಂದಷ್ಟೇ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಶೇ.80ರಷ್ಟು ಸ್ಟ್ರೈಕ್ ರೇಟ್ ಹೊಂದಿದ್ದ ಪಕ್ಷಕ್ಕೆ ಇದು ಅತ್ಯಂತ ನೋವಿನ ಸಂಗತಿಯಾಗಿದೆ. ಎದುರಾಳಿ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣವು ತನಗಿಂತ 27 ಸ್ಥಾನಗಳಲ್ಲಿ ಮುಂದಿರುವುದು ಪಕ್ಷದ ನೋವನ್ನು ಇನ್ನಷ್ಟು ಹೆಚ್ಚಿಸಿದೆ. ಈ ಚುನಾವಣೆಯನ್ನು ಉಭಯ ಬಣಗಳಿಗೆ ಅಸ್ತಿತ್ವದ ಹೋರಾಟ ಎಂದೇ ಬಣ್ಣಿಸಲಾಗಿತ್ತು.
ಕಳೆದ ವರ್ಷ ಎನ್ಸಿಪಿ ವಿಭಜನೆಗೊಂಡ ಬಳಿಕ ಪವಾರ್ಗಳ ನಡುವಿನ ಮೊದಲ ಯುದ್ಧ ಲೋಕಸಭಾ ಚುನಾವಣೆಯಲ್ಲಿ ನಡೆದಿತ್ತು. ಗಮನಾರ್ಹ ಸಂಖ್ಯೆಯಲ್ಲಿ ಸ್ಥಾನಗಳನ್ನು ಗೆದ್ದಿದ್ದ ಶರದ್ ಪವಾರ್ ಬಣ ಎದುರಾಳಿ ಬಣವು ಮೂಲ ಹೆಸರು ಮತ್ತು ಚಿಹ್ನೆಯನ್ನು ಪಡೆದುಕೊಂಡಿದ್ದರೂ ತನ್ನದೇ ನಿಜವಾದ ಎನ್ಸಿಪಿ ಎನ್ನುವುದಕ್ಕೆ ಇದು ಪುರಾವೆಯಾಗಿದೆ ಎಂದು ಹೇಳಿಕೊಂಡಿತ್ತು. ಈ ಬಣಗಳ ನಡುವಿನ ಎರಡನೇ ಯುದ್ಧ, ನಿಸ್ಸಂಶಯವಾಗಿ ಅತ್ಯಂತ ಮಹತ್ವದ ಕಾಳಗ ವಿಧಾನಸಭಾ ಚುನಾವಣೆಯಾಗಿದ್ದು,ಶರದ್ ಬಣದ 12 ಸ್ಥಾನಗಳಿಗೆ ಹೋಲಿಸಿದರೆ 39 ಸ್ಥಾನಗಳಲ್ಲಿ ಮುಂದಿರುವ ಅಜಿತ್ ಬಣ ಗೆಲುವಿನ ಜಯಭೇರಿಗೆ ಸಜ್ಜಾಗಿದೆ.
2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅವಿಭಜಿತ ಎನ್ಸಿಪಿ 54 ಸ್ಥಾನಗಳನ್ನು ಗಳಿಸಿದ್ದರೆ ಮಿತ್ರಪಕ್ಷ ಕಾಂಗ್ರೆಸ್ 44 ಸ್ಥಾನಗಳಲ್ಲಿ ಗೆದ್ದಿತ್ತು. ಆದರೆ ಈ ಚುನಾವಣೆಯಲ್ಲಿ ಈ ಲೆಕ್ಕಾಚಾರವೂ ಬದಲಾಗಿದೆ. ಈ ವರ್ಷ ಶರದ ಬಣ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಉದ್ಧವ ಠಾಕ್ರೆ ನೇತೃತ್ವದ ಶಿವಸೇನೆಗಿಂತ ತೀರ ಹಿಂದೆ ಬೀಳಲಿದೆ.