ಉತ್ತರ ಪ್ರದೇಶ: ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಆರು ಮಂದಿ ಮೃತ್ಯು
Photo credit: PTI
ಬುಲಂದ್ ಶಹರ್: ಸಿಲಿಂಡರ್ ಸ್ಫೋಟಗೊಂಡು, ಮನೆ ನೆಲಸಮಗೊಂಡಿದ್ದರಿಂದ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ನಡೆದಿದೆ. ಸಿಕಂದರಾಬಾದ್ ನ ಆಶಾಪುರಿ ಕಾಲನಿಯಲ್ಲಿ ರಾತ್ರಿ ಸುಮಾರು 9 ಗಂಟೆಗೆ ಸಂಭವಿಸಿದ ಈ ಘಟನೆಯಲ್ಲಿ ಐದು ಮಕ್ಕಳು ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ. ಕಟ್ಟಡದ ಅವಶೇಷಗಳಡಿಯಿಂದ ಹೊರ ತೆಗೆಯಲಾಗಿರುವ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.
ಮೃತರನ್ನು ದೇವತಿ ಹಿವ್ಜಾ, ರಿಯಾಝುದ್ದೀನ್, ಅವರ ಪತ್ನಿ ರುಖ್ಸಾನಾ, ಪುತ್ರರಾದ ಸಲ್ಮಾನ್ ಹಾಗೂ ಆಸ್ ಮುಹಮ್ಮದ್ ಮತ್ತು ಪುತ್ರಿ ತಮನ್ನಾ ಎಂದು ಗುರುತಿಸಲಾಗಿದೆ.
ಸಿಲಿಂಡರ್ ಸ್ಫೋಟವು ಮನೆಯ ಇಟ್ಟಿಗೆಗಳು ಹಾಗೂ ಮೇಲ್ಚಾವಣಿ ಸಿಡಿದು ಹೋಗುವಷ್ಟು ತೀವ್ರತೆಯನ್ನು ಹೊಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ, ಸ್ಫೋಟದ ಸದ್ದು ಹಲವಾರು ಕಿಮೀವರೆಗೂ ಕೇಳಿಸಿತು ಹಾಗೂ ಆ ಸ್ಫೋಟದ ತೀವ್ರತೆಗೆ ನೆರೆಯ ಮನೆಗಳೂ ಕಂಪಿಸಿದವು ಎಂದು ಹೇಳಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ವೈದ್ಯಕೀಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ರಕ್ಷಣಾ ಕಾರ್ಯಾಚರಣೆಗೆ ಸ್ಥಳಕ್ಕೆ ಧಾವಿಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೆಸಿಬಿ ಮೂಲಕ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವ ಮೂಲಕ ರಕ್ಷಣಾ ತಂಡಗಳು ಜನರನ್ನು ರಕ್ಷಿಸಲು ಯತ್ನಿಸುತ್ತಿರುವುದನ್ನು ANI ಸುದ್ದಿ ಸಂಸ್ಥೆ ಹಂಚಿಕೊಂಡಿರುವ ರಕ್ಷಣಾ ಕಾರ್ಯಾಚರಣೆ ವಿಡಿಯೊದಲ್ಲಿ ಕಾಣಬಹುದಾಗಿದೆ.
ಈ ದುರಂತದಲ್ಲಿ ಆಗಿರುವ ಜೀವ ನಷ್ಟಕ್ಕೆ ಮುಖ್ಯಮಂತ್ರಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕು ಹಾಗೂ ಸಂತ್ರಸ್ತರ ಕುಟುಂಬಗಳಿಗೆ ಸಾಧ್ಯವಾದ ಎಲ್ಲ ನೆರವನ್ನೂ ಒದಗಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ನಡುವೆ, ಸ್ಪೋಟದ ಕಾರಣ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.