ಚುನಾವಣಾ ಬಾಂಡ್ ಮೂಲಕ ಟಿಎಂಸಿಗೆ 612 ಕೋಟಿ

ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ಸುಪ್ರೀಂಕೋರ್ಟ್ 2024ರ ಫೆಬ್ರುವರಿ 15ರಂದು ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಪಡಿಸುವ ಮುನ್ನ 2023-24ನೇ ಹಣಕಾಸು ವರ್ಷದಲ್ಲಿ ಚುನಾವಣಾ ಬಾಂಡ್ಗಳ ಮೂಲಕ ಪಡೆದ ದೇಣಿಗೆಯಲ್ಲಿ ಪ್ರಾದೇಶಿಕ ಪಕ್ಷಗಳು ಸಿಂಹಪಾಲು ಹೊಂದಿವೆ ಎನ್ನುವ ಅಂಶ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಾರ್ಷಿಕ ಪರಿಶೋಧಿತ ಲೆಕ್ಕಪತ್ರದಿಂದ ತಿಳಿದು ಬಂದಿದೆ.
2023ರ ಮಾರ್ಚ್ 31ರಿಂದ 2024ರ ಫೆಬ್ರುವರಿ 15ರವರೆಗೆ ತೃಣಮೂಲ ಕಾಂಗ್ರೆಸ್ ಪಕ್ಷ 612.4 ಕೋಟಿ ರೂಪಾಯಿಗಳನ್ನು ಪಡೆದಿದ್ದು, ಬಿಆರ್ಎಸ್ 495.5 ಕೋಟಿ, ಬಿಜೆಡಿ 245.5 ಕೋಟಿ, ಟಿಡಿಪಿ 174.1 ಕೋಟಿ, ವೈಆರ್ಎಸ್ ಕಾಂಗ್ರೆಸ್ ಪಕ್ಷ 121.5 ಕೋಟಿ, 60 ಕೋಟಿ, ಜೆಎಂಎಂ 11.5 ಕೋಟಿ, ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ 5.5 ಕೋಟಿ ರೂಪಾಯಿ ದೇಣಿಗೆ ಪಡೆದಿವೆ.
ಟಿಎಂಸಿ ಪಡೆದ ಒಟ್ಟು ದೇಣಿಗೆಗಳ ಪೈಕಿ ಶೇಕಡ 95ರಷ್ಟು ಚುನಾವಣಾ ಬಾಂಡ್ಗಳ ಮೂಲಕ ಬಂದಿದ್ದರೆ, ಬಿಆರ್ಎಸ್ನ ದೇಣಿಗೆಯಲ್ಲಿ ಈ ಪಾಲು ಶೇಕಡ 82ರಷ್ಟಿದೆ. ಟಿಡಿಪಿ, ವೈಎಸ್ಆರ್ಸಿಪಿ ಮತ್ತು ಜೆಎಂಎಂ ಚುನಾವಣಾ ಬಾಂಡ್ಗಳ ಮೂಲಕ ಪಡೆದ ಪಾಲು ಕ್ರಮವಾಗಿ ಶೇಕಡ 61, ಶೇಕಡ 64, ಶೇಕಡ 33 ಮತ್ತು ಶೇಕಡ 73ರಷ್ಟಿದೆ.
ಪರಿಶೋಧಿತ ವರದಿ ಲಭ್ಯವಿರುವ ನಾಲ್ಕು ರಾಷ್ಟ್ರೀಯ ಪಕ್ಷಗಳ ಪೈಕಿ, ಆಮ್ ಆದ್ಮಿ ಪಾರ್ಟಿ ಮಾತ್ರ ಚುನಾವಣಾ ಬಾಂಡ್ಗಳ ಮೂಲಕ ಪಡೆದ ದೇಣಿಗೆಯನ್ನು ಘೋಷಿಸಿದೆ. ಆಮ್ ಆದ್ಮಿ ಪಕ್ಷ 2023-24ರಲ್ಲಿ ಸ್ವೀಕರಿಸಿದ ದೇಣಿಗೆ ಪೈಕಿ ಶೇಕಡ 44ರಷ್ಟು ಪಾಲು ಚುನಾವಣಾ ಬಾಂಡ್ಗಳ ಮೂಲಕ ಬಂದಿದೆ.
ನಾಲ್ಕು ರಾಷ್ಟ್ರೀಯ ಪಕ್ಷಗಳಾದ ಬಿಎಸ್ಪಿ, ಎಎಪಿ, ಸಿಪಿಎಂ ಹಾಗೂ ಎನ್ಪಿಪಿ ಪೈಕಿ 2023-24ರಲ್ಲಿ ಬಿಎಸ್ಪಿ ಗರಿಷ್ಠ ಅಂದರೆ 64.8 ಕೋಟಿ ರೂಪಾಯಿಗಳನ್ನು, ಆಮ್ ಆದ್ಮಿ ಪಾರ್ಟಿ 22.7 ಕೋಟಿ, ಎನ್ಪಿಪಿ 22.4 ಲಕ್ಷ ರೂಪಾಯಿ ಮತ್ತು ಸಿಪಿಎಂ 16.8 ಲಕ್ಷ ರೂಪಾಯಿ ಪಡೆದಿವೆ. ಈ ಪಕ್ಷಗಳು ಹಿಂದಿನ ಹಣಕಾಸು ವರ್ಷದಲ್ಲಿ ಕ್ರಮವಾಗಿ 29.3 ಕೋಟಿ, 85.2 ಕೋಟಿ, 7.6 ಕೋಟಿ ಮತ್ತು 14.2 ಲಕ್ಷ ರೂಪಾಯಿ ದೇಣಿಗೆ ಪಡೆದಿದ್ದವು.