ಬಜೆಟ್ನಲ್ಲಿ ರಕ್ಷಣಾ ಇಲಾಖೆಗೆ 6,21,940 ಕೋಟಿ ರೂ. ಅನುದಾನ
ಸಶಸ್ತ್ರ ಪಡೆಗಳ ಸಾಮರ್ಥ್ಯ ವೃದ್ಧಿಗೆ ಪೂರಕ ಎಂದ ರಾಜ್ನಾಥ್ ಸಿಂಗ್
ರಾಜ್ನಾಥ್ ಸಿಂಗ್ | PTI
ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಸಂಸತ್ನಲ್ಲಿ ಮಂಡಿಸಿದ ಬಜೆಟ್ನಲ್ಲಿ, ರಕ್ಷಣಾ ಇಲಾಖೆಗೆ 2024-25ರ ಸಾಲಿಗೆ 6,21,940 ಕೋಟಿ ರೂ. ಅನುದಾನವನ್ನು ನೀಡಿದ್ದಾರೆ. ಈ ವರ್ಷದ ಆದಿ ಭಾಗದಲ್ಲಿ ಮಂಡಿಸಲಾಗಿರುವ ಮಧ್ಯಂತರ ಬಜೆಟ್ನಲ್ಲೂ ಇಷ್ಟೇ ಮೊತ್ತವನ್ನು ನೀಡಲಾಗಿತ್ತು.
ಪೂರ್ವ ಲಡಾಖ್ನಲ್ಲಿ ಚೀನಾ ಜೊತೆಗಿನ ನಿರಂತರ ಗಡಿ ಸಂಘರ್ಷ ಮತ್ತು ಆಯಕಟ್ಟಿನ ಸಮುದ್ರ ಮಾರ್ಗಗಳಲ್ಲಿ ಎದುರಾಗಿರುವ ಭದ್ರತಾ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಅನುದಾನ ಹಂಚಿಕೆ ಮಾಡಲಾಗಿದೆ.
ರಕ್ಷಣಾ ಇಲಾಖೆಗೆ ಈ ಬಾರಿ ಒದಗಿಸಲಾಗಿರುವ ಮೊತ್ತವು ಹಿಂದಿನ ಹಣಕಾಸು ವರ್ಷದಲ್ಲಿ ಒದಗಿಸಲಾಗಿರುವ ಮೊತ್ತಕ್ಕಿಂತ 4.79 ಶೇಕಡ ಹೆಚ್ಚಾಗಿದೆ.
ಹೊಸ ಶಸ್ತ್ರಾಸ್ತ್ರಗಳು, ವಿಮಾನಗಳು, ಯುದ್ಧನೌಕೆಗಳು ಮತ್ತು ಇತರ ಸೇನಾ ಉಪಕರಣಗಳ ಖರೀದಿಗಾಗಿ 1.72 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ಮೀಸಲಿಡಲಾಗಿದೆ. 2023-24ರ ಸಾಲಿನಲ್ಲಿ (ಕಳೆದ ಹಣಕಾಸು ವರ್ಷ) ಈ ಉದ್ದೇಶಕ್ಕಾಗಿ 1.63 ಲಕ್ಷ ಕೋಟಿ ರೂ. ಒದಗಿಸಲಾಗಿತ್ತು. ಆದರೆ, ಪರಿಷ್ಕರಣೆಯ ಬಳಿಕ ಆ ಮೊತ್ತ 1.57 ಲಕ್ಷ ಕೋಟಿ ರೂ.ಗೆ ಇಳಿದಿತ್ತು.
ದೈನಂದಿನ ಕಾರ್ಯಾಚರಣೆಗಳು ಮತ್ತು ವೇತನಗಳಿಗಾಗಿ 2.82 ಲಕ್ಷ ಕೋಟಿ ರೂ. ನಿಗದಿಪಡಿಸಲಾಗಿದೆ. ರಕ್ಷಣಾ ಪಿಂಚಣಿಗಾಗಿ 1,41,205 ಕೋಟಿ ರೂ. ತೆಗೆದಿಡಲಾಗಿದೆ. ಇದು 2023-24ರ ಸಾಲಿನಲ್ಲಿ ಒದಗಿಸಲಾಗಿರುವ ಮೊತ್ತಕ್ಕಿಂತ 2.17 ಶೇಕಡ ಅಧಿಕವಾಗಿದೆ.
ಫೆಬ್ರವರಿಯಲ್ಲಿ ಮಂಡಿಸಲಾಗಿದ್ದ ಮಧ್ಯಂತರ ಬಜೆಟ್ನಲ್ಲಿ ರಕ್ಷಣೆಗೆ 6,21,540 ಕೋಟಿ ರೂ. ಮೀಸಲಿಡಲಾಗಿತ್ತು.
ಹಾಲಿ ಬಜೆಟ್ನಲ್ಲಿ, ಆಧುನೀಕರಣಕ್ಕೆ 1,40,690 ಕೋಟಿ ರೂ. ಒದಗಿಸಲಾಗಿದೆ. ಈ ಪೈಕಿ 75 ಶೇಕಡ ಮೊತ್ತವನ್ನು ದೇಶಿ ಉದ್ದಿಮೆಗಳಿಂದ ಪಡೆದುಕೊಳ್ಳುವ ಸಲಕರಣೆಗಳಿಗಾಗಿ ಖರ್ಚು ಮಾಡಬೇಕಾಗಿದೆ.
ಡಿಆರ್ಡಿಒಗೆ 23,855 ಕೋಟಿ ರೂ.:
ರಕ್ಷಣಾ ಬಜೆಟ್ನ ಕ್ಯಾಪಿಟಲ್ ಹೆಡ್ ಅಡಿಯಲ್ಲಿ, ಗಡಿ ರಸ್ತೆಗಳ ಸಂಸ್ಥೆ (ಬಿಆರ್ಒ)ಗೆ 6,500 ಕೋಟಿ ರೂಪಾಯಿ ಒದಗಿಸಲಾಗಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ಗೆ ಹಾಲಿ ಬಜೆಟ್ನಲ್ಲಿ 23,855 ಕೋಟಿ ರೂಪಾಯಿ ನೀಡಲಾಗಿದೆ. 2023-24ರ ಸಾಲಿನಲ್ಲಿ ಈ ಸಂಸ್ಥೆಗೆ 23,263 ಕೋಟಿ ರೂ. ನೀಡಲಾಗಿತ್ತು.
ಸಶಸ್ತ್ರ ಪಡೆಗಳ ಸಾಮರ್ಥ್ಯ ವೃದ್ಧಿಗೆ ಪೂರಕ: ರಾಜ್ನಾಥ್ ಸಿಂಗ್
ಬಲಪಡಿಸುವುದು ರಕ್ಷಣೆಗೆ ನೀಡಲಾಗಿರುವ ಬಜೆಟ್ ಅನುದಾನದ ಬಗ್ಗೆ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ತೃಪ್ತಿ ವ್ಯಕ್ತಪಡಿಸಿದ್ದಾರೆ. ಶಸ್ತ್ರಾಸ್ತ್ರಗಳ ಖರೀದಿಗಾಗಿ ನೀಡಲಾಗಿರುವ 1,72,000 ಕೋಟಿ ರೂ. ಅನುದಾನವು ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದು ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.
ಸ್ವದೇಶಿ ಕಂಪೆನಿಗಳಿAದ ಸಲಕರಣೆಗಳ ಖರೀದಿಗಾಗಿ ನೀಡಲಾಗಿರುವ 1,05,518 ಕೋಟಿ ರೂಪಾಯಿ ಮೊತ್ತವು ರಕ್ಷಣಾ ಕ್ಷೇತ್ರದಲ್ಲಿನ ‘ಆತ್ಮನಿರ್ಭರ’ಕ್ಕೆ ಬಲ ನೀಡುವುದು ಎಂದು ಹೇಳಿದರು.