ಕಾಂಗ್ರೆಸ್ ಬ್ಯಾಂಕ್ ಖಾತೆಯಿಂದ 65 ಕೋಟಿ ರೂ. ಕಡಿತಕ್ಕೆ ಐಟಿ ಸೂಚನೆ: ಕಾಂಗ್ರೆಸ್ ಆಕ್ರೋಶ
ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: ತನ್ನ ಬ್ಯಾಂಕ್ ಖಾತೆಗಳಿಂದ 65 ಕೋಟಿ ರೂ. ಕಡಿತಗೊಳಿಸುವಂತೆ ಆದಾಯ ತೆರಿಗೆ ಇಲಾಖೆ ವಿವಿಧ ಬ್ಯಾಂಕ್ ಗಳಿಗೆ ಪತ್ರ ಬರೆದಿರುವುದು ಪ್ರಜಾಸತ್ತಾತ್ಮಕ ನಡೆಯಲ್ಲ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.
‘‘ಹಿಂದಿನ ವರ್ಷಗಳ ತೆರಿಗೆ ಪಾವತಿಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವ ಹೊರತಾಗಿಯೂ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್, ಯೂತ್ ಕಾಂಗ್ರೆಸ್ನ ಬ್ಯಾಂಕ್ ಖಾತೆಗಳಿಂದ 65 ಕೋಟಿ ರೂಪಾಯಿ ಕಡಿತಗೊಳಿಸುವಂತೆ ವಿವಿಧ ಬ್ಯಾಂಕ್ ಗಳಿಗೆ ಪತ್ರ ಬರೆದಿದೆ’’ ಎಂದು ಕಾಂಗ್ರೆಸ್ನ ಕೋಶಾಧಿಕಾರಿ ಅಜಯ್ ಮಾಕನ್ ಆರೋಪಿಸಿದ್ದಾರೆ.
ಈ ನಡುವೆ ‘ಎಕ್ಸ್’ನ ಪೋಸ್ಟ್ನಲ್ಲಿ ಅಜಯ್ ಮಾಕನ್ ಆದಾಯ ತೆರಿಗೆ ಇಲಾಖೆಯ ಕ್ರಮದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ‘‘ಬಹುಪಕ್ಷೀಯ ರಾಜಕೀಯ ವ್ಯವಸ್ಥೆ ಇರುವ ಭಾರತದಲ್ಲಿ ಕೇಂದ್ರ ಸರಕಾರದ ತನಿಖಾ ಸಂಸ್ಥೆಯ ಕ್ರಮಗಳು ಕಳವಳ ಉಂಟು ಮಾಡಿದೆ. ಇದನ್ನು ತಡೆಯದೇ ಇದ್ದರೆ, ಭಾರತದಲ್ಲಿ ಪ್ರಜಾಪ್ರಭುತ್ವ ಅಂತ್ಯಗೊಳ್ಳಲಿದೆ. ನ್ಯಾಯಾಂಗ ಮಧ್ಯಪ್ರವೇಶಿಸದೇ ಇದ್ದರೆ, ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಾಯ ಎದುರಾಗಲಿದೆ’’ ಎಂದು ಅವರು ಹೇಳಿದರು.
ಹಿಂದಿನ ತೆರಿಗೆಯಲ್ಲಿ ಲೋಪದೋಷಗಳಿಗೆ ಎಂದು ಆರೋಪಿಸಿ 210 ಕೋಟಿ ರೂ. ದಂಡ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಗೆ ನೋಟಿಸು ನೀಡಿತ್ತು. ಈ ನೋಟಿಸ್ ಗೆ ಆದಾಯ ತೆರಿಗೆ ಇಲಾಖೆ ಸಕ್ಷಮ ಪ್ರಾಧಿಕಾರ ತಡೆ ನೀಡಿದ ಹೊರತಾಗಿಯೂ ತೆರಿಗೆ ಅಧಿಕಾರಿಗಳು ತಮ್ಮ ಖಾತೆಯಿಂದ ಹಣ ಕಡಿತಗೊಳಿಸಿದ್ದಾರೆ. ಇದು ಪ್ರಜಾಸತ್ತಾತ್ಮಕ ನಡೆಯಲ್ಲ ಎಂದು ಅವರು ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆ ಬರೆದ ಪತ್ರಕ್ಕೆ ಸಂಬಂಧಿಸಿ ಬ್ಯಾಂಕ್ ಗಳಿಗೆ ಪತ್ರ ಬರೆದಿರುವ ಕಾಂಗ್ರೆಸ್, ಪ್ರಕರಣ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದಲ್ಲಿ ವಿಚಾರಣೆಯ ಹಂತದಲ್ಲಿ ಇರುವುದರಿಂದ ಯಾವುದೇ ಕಾರಣಕ್ಕೂ ಹಣ ಕಡಿತಗೊಳಿಸದಂತೆ ತಿಳಿಸಿದೆ ಎಂದು ಅಜಯ್ ಮಾಕನ್ ತಿಳಿಸಿದ್ದಾರೆ.
‘ಎಕ್ಸ್’ನ ಪೋಸ್ಟ್ ಒಂದರಲ್ಲಿ ಮಾಕನ್, ‘‘ಶನಿವಾರ ಸಂಜೆಯಿಂದ ಕಾಂಗ್ರೆಸ್ ಸರಕಾರಿ ಆಡಳಿತ ಯಂತ್ರದ ನಡತೆಗೆ ಬಲಿಪಶುವಾಗುತ್ತಿದೆ. ನಮಗೆ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ’’ ಎಂದಿದ್ದಾರೆ.