ಸನಾತನ ಧರ್ಮ ಟೀಕಾಕಾರರ 650 ಪ್ರತಿಕೃತಿಗಳ ದಹನಕ್ಕೆ ದಿಲ್ಲಿ ರಾಮಲೀಲಾ ಮಹಾಸಂಘದ ನಿರ್ಧಾರ
ಸಾಂದರ್ಭಿಕ ಚಿತ್ರ | Photo : indianexpress
ಹೊಸದಿಲ್ಲಿ: ದಸರಾ ಸಂದರ್ಭದಲ್ಲಿ ಅ.14ರಂದು ರಾವಣ,ಕುಂಭಕರ್ಣ ಮತ್ತು ಮೇಘನಾದರ ಜೊತೆಗೆ ಸನಾತನ ಧರ್ಮದ ಟೀಕಾಕಾರರ ಕನಿಷ್ಠ 650 ಪ್ರತಿಕೃತಿಗಳನ್ನೂ ಸುಡಲು ದಿಲ್ಲಿಯ ಶ್ರೀರಾಮಲೀಲಾ ಮಹಾಸಂಘವು ನಿರ್ಧರಿಸಿದೆ ಎಂದು ಸುದ್ದಿ ಸಂಸ್ಥೆಯು ವರದಿ ಮಾಡಿದೆ.
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ಕಳೆದ ತಿಂಗಳು ಸನಾತನ ಧರ್ಮದ ವಿರುದ್ಧ ಹೇಳಿಕೆಗಳನ್ನು ನೀಡಿದ್ದ ಹಿನ್ನೆಲೆಯಲ್ಲಿ ಸಂಘವು ಈ ಕ್ರಮಕ್ಕೆ ಮುಂದಾಗಿದೆ.
ರಾಮಾಯಣದಲ್ಲಿಯ ಖಳನಾಯಕರ ಪ್ರತಿಕೃತಿಗಳು 80ರಿಂದ 100 ಅಡಿ ಎತ್ತರವಿದ್ದರೆ ಸನಾತನ ಧರ್ಮ ವಿದ್ರೋಹಿಗಳು ಎಷ್ಟು ಗೌಣವಾಗಿದ್ದಾರೆ ಎನ್ನುವುದನ್ನು ತೋರಿಸಲು ಅವರ ಪ್ರತಿಕೃತಿಗಳು 6ರಿಂದ 15 ಅಡಿ ಎತ್ತರವಿರಲಿವೆ ಎಂದು ಮಹಾಸಂಘದ ಅಧ್ಯಕ್ಷ ಅರ್ಜುನ ಕುಮಾರ ಸುದ್ದಿಸಂಸ್ಥೆಗೆ ತಿಳಿಸಿದರು.
ಟೀಕಾಕಾರರು ಅಮುಖ್ಯರಾಗಿದ್ದರೆ ಅವರ ಅಷ್ಟೊಂದು ಪ್ರತಿಕೃತಿಗಳ ನಿರ್ಮಾಣ,ಅದಕ್ಕಾಗಿ ವೆಚ್ಚ ಮತ್ತು ಅವುಗಳನ್ನು ಸುಡುವುದು ಏಕೆ ಎಂಬ ಸುದ್ದಿಸಂಸ್ಥೆಯ ಪ್ರಶ್ನೆಗೆ ಉತ್ತರಿಸುವುದರಿಂದ ಅವರು ನುಣುಚಿಕೊಂಡರು.
ಕೆಲವು ರಾಜಕೀಯ ನಾಯಕರಿಂದ ಸನಾತನ ಧರ್ಮ ವಿರೋಧಿ ಅಭಿಯಾನದತ್ತ ಜನರ ಗಮನವನ್ನು ಸೆಳೆಯುವಂತೆ ದಿಲ್ಲಿ ಬಿಜೆಪಿಯು ಮಹಾಸಂಘಕ್ಕೆ ಸೂಚಿಸಿತ್ತು.