ಹೊಸದಿಲ್ಲಿ | 7 ಮಂದಿ ಶಾಸಕರು ಎಎಪಿ ಪಕ್ಷಕ್ಕೆ ರಾಜೀನಾಮೆ

ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಗೆ ಮತದಾನಕ್ಕೆ ಐದು ದಿನಗಳ ಮೊದಲು 7 ಮಂದಿ ಶಾಸಕರು ಎಎಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಮೆಹ್ರೌಲಿ ಕ್ಷೇತ್ರದ ಶಾಸಕ ನರೇಶ್ ಯಾದವ್, ತ್ರಿಲೋಕಪುರಿ ಕ್ಷೇತ್ರದ ಶಾಸಕ ರೋಹಿತ್ ಕುಮಾರ್, ಜನಕಪುರಿ ಕ್ಷೇತ್ರದ ಶಾಸಕ ರಾಜೇಶ್ ರಿಷಿ, ಕಸ್ತೂರ್ಬಾ ನಗರದ ಶಾಸಕ ಮದನ್ ಲಾಲ್, ಆದರ್ಶ ನಗರದ ಶಾಸಕ ಪವನ್ ಶರ್ಮಾ, ಪಾಲಮ್ ಕ್ಷೇತ್ರದ ಶಾಸಕರಾದ ಭಾವನಾ ಗೌರ್, ಬಿಜ್ವಾಸನ್ ಕ್ಷೇತ್ರದ ಭೂಪಿಂದರ್ ಸಿಂಗ್ ಜೂನ್ ರಾಜೀನಾಮೆ ನೀಡಿದ ಶಾಸಕರಾಗಿದ್ದಾರೆ.
ಭಾವನ ಗೌರ್ ರಾಜೀನಾಮೆ ಪತ್ರದಲ್ಲಿ ಕೇಜ್ರಿವಾಲ್ ಬಳಿ ನಿರಾಶೆ ವ್ಯಕ್ತಪಡಿಸಿದ್ದು, ನಾನು ನಿಮ್ಮ ಮೇಲೆ ನಂಬಿಕೆ ಕಳೆದುಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. 7 ಮಂದಿ ಶಾಸಕರು ಕೂಡ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿಯಿಂದ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಶಾಸಕರು ತಮ್ಮ ರಾಜೀನಾಮೆ ಪತ್ರವನ್ನು ದಿಲ್ಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಅವರಿಗೆ ಕೂಡ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.
70 ಸದಸ್ಯ ಬಲದ ದಿಲ್ಲಿ ವಿಧಾನಸಭೆಗೆ ಫೆ.5 ರಂದು ಚುನಾವಣೆ ನಡೆಯಲಿದ್ದು, ಫೆ.8 ರಂದು ಮತ ಎಣಿಕೆ ನಡೆಯಲಿದೆ.