ಮೊದಲ 7 ಟೆಸ್ಟ್ ಪಂದ್ಯಗಳಲ್ಲಿ 7 ಅರ್ಧಶತಕ | ಸುನೀಲ್ ಗವಾಸ್ಕರ್ ದಾಖಲೆ ಮುರಿದ ಶ್ರೀಲಂಕಾದ ಕಮಿಂದು ಮೆಂಡಿಸ್
ಪಾಕಿಸ್ತಾನದ ಸ್ಟಾರ್ ಶಕೀಲ್ರ ವಿಶ್ವ ದಾಖಲೆ ಸರಿಗಟ್ಟಿದ ಲಂಕಾದ ಆಟಗಾರ
ಕಮಿಂದು ಮೆಂಡಿಸ್ | PC : NDTV
ಗಾಲೆ : ಶ್ರೀಲಂಕಾದ ಸ್ಟಾರ್ ಆಟಗಾರ ಕಮಿಂದು ಮೆಂಡಿಸ್ 2022ರ ಜುಲೈನಲ್ಲಿ ತನ್ನ ಮೊದಲ ಟೆಸ್ಟ್ ಪಂದ್ಯವನ್ನಾಡಿದ ನಂತರ ಸ್ಥಿರ ಪ್ರದರ್ಶನದಿಂದ ಗಮನ ಸೆಳೆಯುತ್ತಿದ್ದಾರೆ. ಮೆಂಡಿಸ್ ತಾನಾಡಿದ ಮೊದಲ 6 ಟೆಸ್ಟ್ ಪಂದ್ಯಗಳಲ್ಲೂ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಇದೀಗ ಬುಧವಾರ ನ್ಯೂಝಿಲ್ಯಾಂಡ್ ವಿರುದ್ದ ಟೆಸ್ಟ್ ಪಂದ್ಯದಲ್ಲಿ ಮೆಂಡಿಸ್ ಶತಕ ಸಿಡಿಸಿದ್ದಾರೆ. ಈ ಮೂಲಕ ತನ್ನ ಮೊದಲ 7 ಟೆಸ್ಟ್ ಪಂದ್ಯಗಳಲ್ಲಿ 50ಕ್ಕೂ ಅಧಿಕ ರನ್ ಗಳಿಸಿದ ಸಾಧನೆ ಮಾಡಿದ್ದಾರೆ.
ಟೆಸ್ಟ್ ಕ್ರಿಕೆಟ್ನ 147 ವರ್ಷಗಳ ಇತಿಹಾಸದಲ್ಲಿ ಕೇವಲ ಒಂದು ಬಾರಿ ಮಾತ್ರ ಈ ಸಾಧನೆ ಮಾಡಲಾಗಿತ್ತು. ಕಳೆದ ವರ್ಷ ಪಾಕಿಸ್ತಾನದ ಸೌದ್ ಶಕೀಲ್ ತನ್ನ ಮೊದಲ 7 ಟೆಸ್ಟ್ ಪಂದ್ಯಗಳಲ್ಲಿ 50 ಪ್ಲಸ್ ಸ್ಕೋರ್ ಗಳಿಸಿದ ಮೊದಲ ಟೆಸ್ಟ್ ಆಟಗಾರ ಎನಿಸಿಕೊಂಡು ವಿಶ್ವ ದಾಖಲೆ ನಿರ್ಮಿಸಿದ್ದರು. ಈಗ ಮೆಂಡಿಸ್ ಅವರು ಶಕೀಲ್ರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇದಕ್ಕೂ ಮೊದಲು ಭಾರತದ ಸುನೀಲ್ ಗವಾಸ್ಕರ್, ಪಾಕಿಸ್ತಾನದ ಸಯೀದ್ ಅಹ್ಮದ್, ವೆಸ್ಟ್ಇಂಡೀಸ್ನ ಬೆಸಿಲ್ ಬುಚರ್ ಹಾಗೂ ನ್ಯೂಝಿಲ್ಯಾಂಡ್ನ ಬರ್ಟ್ ಸುಟ್ಕ್ಲಿಫ್ ತಮ್ಮ ಮೊದಲ 6 ಟೆಸ್ಟ್ಗಳಲ್ಲಿ ಅರ್ಧಶತಕ ಸಿಡಿಸಿದ್ದರು.
ಮೆಂಡಿಸ್ರ ವೀರೋಚಿತ ಶತಕದ ನೆರವಿನಿಂದ ನ್ಯೂಝಿಲ್ಯಾಂಡ್ ವಿರುದ್ಧ ಬುಧವಾರ ಮೊದಲ ದಿನದಾಟದಲ್ಲಿ ಶ್ರೀಲಂಕಾ ತಂಡ 7 ವಿಕೆಟ್ಗಳ ನಷ್ಟಕ್ಕೆ 302 ರನ್ ಗಳಿಸಿತ್ತು.