ಪುಣೆಯಲ್ಲಿ 73 ಮಂದಿಗೆ ಜಿಬಿಎಸ್ ಸೋಂಕು; ಯಾವುದೇ ಸಾವು ಸಂಭವಿಸಿಲ್ಲ: ವರದಿ

PC: x.com/htTweets
ಪುಣೆ: ನಗರದಲ್ಲಿ ಗುಲಿಯನ್-ಬರ್ರೆ ಸಿಂಡ್ರೋಮ್ (ಜಿಬಿಎಸ್) ಸೋಂಕು ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ ಎಂದು ಕಳೆದ ಸೋಮವಾರ ಮೂರು ಆಸ್ಪತ್ರೆಗಳಿಂದ ಸ್ಥಳೀಯ ಆರೋಗ್ಯಾಧಿಕಾರಿಗಳಿಗೆ ವರದಿ ಬಂದ ಬೆನ್ನಲ್ಲೇ ಶುಕ್ರವಾರ 73 ಜಿಬಿಎಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ನಾಲ್ಕು ದಿನಗಳ ಹಿಂದೆ 26 ಪ್ರಕರಣಗಳು ವರದಿಯಾಗಿದ್ದವು. ಆದರೆ ಜಿಬಿಎಸ್ ಸೋಂಕಿತರು ಮೃತಪಟ್ಟ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ. ಸಮಾಜದಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತದೆಯಾದರೂ ಸಾಮಾನ್ಯವಾಗಿ 1-2 ಮಂದಿ ಮಾತ್ರ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.
ಇದೀಗ 73 ಮಂದಿ ಸೋಂಕಿತರ ಪೈಕಿ ಹದಿನಾಲ್ಕು ಮಂದಿಗೆ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದ್ದು, ಮಹಾರಾಷ್ಟ್ರದ ಆರೋಗ್ಯಾಧಿಕಾರಿಗಳು ಮನೆ ಮನೆ ಸಮೀಕ್ಷೆಗೆ ಮುಂದಾಗಿದ್ದಾರೆ. ಸೋಂಕಿನ ಲಕ್ಷಣಗಳನ್ನು ಪರಿಶೀಲಿಸಲಾಗುತ್ತಿದ್ದು, ಜಿಬಿಎಸ್ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಎರಡು ದಿನಗಳಲ್ಲಿ ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಆರೋಗ್ಯ ಕಾರ್ಯಕರ್ತರು 7200 ಮನೆಗಳಲ್ಲಿ ಸಮೀಕ್ಷೆ ಕೈಗೊಂಡಿದ್ದಾರೆ.
ಕ್ಯಾಂಪಿಲೋಬ್ಯಾಕ್ಟರ್ ಜೆಜುನಿ ಎಂಬ ರೋಗಕಾರಕ ಬ್ಯಾಕ್ಟೀರಿಯಾ ಜಿಬಿಎಸ್ಗೆ ಕಾರಣವಾಗುತ್ತದೆ. ಇದರಲ್ಲಿ ರೋಗಿಯ ಪ್ರತಿರೋಧ ವ್ಯವಸ್ಥೆಯು ನರಗಳ ಮೇಲೆ ದಾಳಿ ಮಾಡುತ್ತದೆ. ಹಲವು ಆಸ್ಪತ್ರೆಗಳಲ್ಲಿ ನಡೆಸಿದ ಮಲ ಪರೀಕ್ಷೆಯಲ್ಲಿ ರೋಗಲಕ್ಷಣಗಳು ಕಂಡುಬಂದಿರುವುದು ಬ್ಯಾಕ್ಟೀರಿಯಾ ಸೋಂಕು ಹರಡುತ್ತಿರುವುದಕ್ಕೆ ಪುರಾವೆ ಎಂದು ತಜ್ಞರು ಹೇಳುತ್ತಾರೆ. ಸಣ್ಣ ಮಕ್ಕಳು ಮತ್ತು ಶಿಶುಗಳಲ್ಲೂ ಈ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.