ಈ ವರ್ಷ 75 ಭಯೋತ್ಪಾದಕರ ಹತ್ಯೆ: ಭಾರತೀಯ ಸೇನೆ
PC : NDTV
ಹೊಸದಿಲ್ಲಿ: ಭದ್ರತಾ ಪಡೆ ಜಮ್ಮು ಹಾಗೂ ಕಾಶ್ಮೀರದಲ್ಲಿ ಈ ವರ್ಷ ಇದುವರೆಗೆ ಒಟ್ಟು 75 ಮಂದಿ ಭಯೋತ್ಪಾದಕರನ್ನು ಹತ್ಯೆಗೈದಿದೆ. ಅವರಲ್ಲಿ ಶೇ. 60 ಪಾಕಿಸ್ತಾನದ ಭಯೋತ್ಪಾದಕರು ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಭಯೋತ್ಪಾದಕ ಸಂಘಟನೆಗಳು ನಾಲ್ವರು ಸ್ಥಳೀಯ ಯುವಕರನ್ನು ಮಾತ್ರ ನೇಮಿಸಲು ಸಫಲವಾಗಿರುವುದು ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಅಂದರೆ, ಭದ್ರತಾ ಪಡೆ ಪ್ರತಿ ಐದು ದಿನಗಳಿಗೊಮ್ಮೆ ಓರ್ವ ಭಯೋತ್ಪಾದಕನನ್ನು ಹತ್ಯೆಗೈದಿದೆ. ಇದುವರೆಗೆ ಹತ್ಯೆಗೈದ 75 ಭಯೋತ್ಪಾದಕರಲ್ಲಿ ಹೆಚ್ಚಿನವರು ವಿದೇಶಿಯರು ಎಂದು ಅವರು ತಿಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆ (ಎಲ್ಒಸಿ)ಹಾಗೂ ಅಂತರ ರಾಷ್ಟ್ರೀಯ ಗಡಿ (ಐಬಿ)ಯಲ್ಲಿ ಒಳನುಸುಳಲು ಪ್ರಯತ್ನಿಸಿದ ಸಂದರ್ಭ ಹತ್ಯೆಯಾದ 17 ಭಯೋತ್ಪಾದಕರು ಹಾಗೂ ದುರ್ಗಮ ಪ್ರದೇಶಗಳಲ್ಲಿ ಎನ್ಕೌಂಟರ್ನಲ್ಲಿ ಹತ್ಯೆಯಾದ 26 ಭಯೋತ್ಪಾದಕರು ಕೂಡ ಇವರಲ್ಲಿ ಸೇರಿದ್ದಾರೆ. ಭದ್ರತಾ ಪಡೆಯ ಕಾರ್ಯಾಚರಣೆ ಹೆಚ್ಚುತ್ತಿರುವ ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಪ್ರಮುಖ ಹೆಜ್ಜೆ ಎಂದು ಅವರು ತಿಳಿಸಿದ್ದಾರೆ.
ಮೃತಪಟ್ಟ 42 ಸ್ಥಳೀಯರಲ್ಲದ ಭಯೋತ್ಪಾದಕರಲ್ಲಿ ಹೆಚ್ಚಿನವರು ಜಮ್ಮು ವಲಯದ ಜಮ್ಮು, ಉಧಮ್ಪುರ, ಕಥುವಾ, ದೋಡಾ ಹಾಗೂ ರಾಜೌರಿಯಲ್ಲಿ ಹತರಾಗಿದ್ದಾರೆ. ವಿದೇಶಿ ಭಯೋತ್ಪಾದಕರು ಕಾಶ್ಮೀರ ಕಣಿವೆಯ ಬಾರಾಮುಲ್ಲಾ, ಬಂಡಿಪೋರಾ, ಕುಪ್ವಾರ ಹಾಗೂ ಕುಲ್ಗಾಂವ್ ಜಿಲ್ಲೆಗಳಲ್ಲಿ ಹತರಾಗಿದ್ದಾರೆ ಎಂದು ಲಭ್ಯವಿರುವ ಅಂಕಿಅಂಶಗಳು ತಿಳಿಸಿದೆ.