78ನೇ ಸ್ವಾತಂತ್ರ್ಯ ದಿನಾಚರಣೆ | ಮುಂದಿನ ಐದು ವರ್ಷಗಳಲ್ಲಿ 75,000 ವೈದ್ಯಕೀಯ ಸೀಟುಗಳನ್ನು ಸೃಷ್ಟಿಸಲಾಗುವುದು: ಪ್ರಧಾನಿ ಮೋದಿ ಭರವಸೆ
ಹೊಸದಿಲ್ಲಿ: 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪು ಕೋಟೆಯಲ್ಲಿ ಸತತ 11ನೇ ಬಾರಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ, “ಭಾರತದ ವೈದ್ಯಕೀಯ ಕಾಲೇಜುಗಳಲ್ಲಿ ಮುಂದಿನ ಐದು ವರ್ಷಗಳಲ್ಲಿ 75,000 ವೈದ್ಯಕೀಯ ಸೀಟುಗಳನ್ನು ಸೃಷ್ಟಿಸಲಾಗುವುದು. ವಿಕಸಿತ ಭಾರತ 2047 ಸ್ವಸ್ಥ ಭಾರತ ಕೂಡಾ ಆಗಿರಬೇಕು. ಇದಕ್ಕಾಗಿ ರಾಷ್ಟ್ರೀಯ ಪೋಷಣ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಧ್ವಜಾರೋಹಣ ನೆರವೇರಿಸಿದ ನಂತರ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ವಿದೇಶಗಳಿಗೆ ತೆರಳದಂತಹ ಶಿಕ್ಷಣ ವ್ಯವಸ್ಥೆಯನ್ನು ನಾವು ದೇಶದಲ್ಲಿ ನಿರ್ಮಿಸಬೇಕಿದೆ” ಎಂದು ಅಭಿಪ್ರಾಯ ಪಟ್ಟರು.
ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಶ್ಲಾಘಿಸಿದ ಅವರು, ಜಾಗತಿಕವಾಗಿ ಅತ್ಯಂತ ಬಲಿಷ್ಠವಾದ ಕೆಲವೇ ಬ್ಯಾಂಕ್ ಗಳ ಪೈಕಿ ಭಾರತೀಯ ಬ್ಯಾಂಕ್ ಗಳು ಸೇರಿವೆ. ಸರಕಾರವು ಬ್ಯಾಂಕಿಂಗ್ ವಲಯದಲ್ಲಿ ಮಹತ್ತರ ಸುಧಾರಣೆಗಳನ್ನು ಜಾರಿಗೊಳಿಸಲಿದೆ ಎಂದು ಹೇಳಿದರು.
“ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಸ್ವಲ್ಪ ಯೋಚಿಸಿ. ಅಲ್ಲಿ ಪ್ರಗತಿಯಿರಲಿಲ್ಲ, ವಿಸ್ತರಣೆ ಇರಲಿಲ್ಲ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ವಿಶ್ವಾಸವಿರಲಿಲ್ಲ. ನಾವು ಬ್ಯಾಂಕಿಂಗ್ ವಲಯವನ್ನು ಬಲಿಷ್ಠಗೊಳಿಸಲು ಮಹತ್ತರ ಸುಧಾರಣೆಗಳನ್ನು ಜಾರಿಗೊಳಿಸಿದೆವು. ಈ ಸುಧಾರಣೆಗಳಿಂದಾಗಿ, ಜಾಗತಿಕವಾಗಿ ಬಲಿಷ್ಠವಾಗಿರುವ ಕೆಲವೇ ಬ್ಯಾಂಕ್ ಗಳ ಪೈಕಿ ಭಾರತೀಯ ಬ್ಯಾಂಕ್ ಗಳು ಸೇರಿವೆ” ಎಂದರು.
‘ವಿಕಸಿತ ಭಾರತ 2047 ಗುರಿಯನ್ನು ಸಾಧಿಸಲು ನಾವು ಆಡಳಿತದಲ್ಲಿ ಸುಧಾರಣೆಗಳನ್ನು ಉತ್ತೇಜಿಸಬೇಕಿದೆ. ಇದರಿಂದಾಗಿ ಸಾಮಾನ್ಯರ ಬದುಕಿನಲ್ಲಿ ಯಾವುದೇ ಅಡಚಣೆ ಇರುವುದಿಲ್ಲ. ಆಡಳಿತಾತ್ಮಕ ವ್ಯವಸ್ಥೆಯ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕಾದ ಅಗತ್ಯವಿದೆ” ಎಂದು ಅವರು ಹೇಳಿದರು.
ಅಪರಾಧ ಕಾನೂನುಗಳಲ್ಲಿ ನಾವು ಶಿಕ್ಷೆಗಿಂತ ನ್ಯಾಯಕ್ಕೆ ಹೆಚ್ಚು ಆದ್ಯತೆ ನೀಡಿದ್ದೇವೆ ಎಂದೂ ಅವರು ತಿಳಿಸಿದರು.
ಭಾರತವನ್ನು ಶೀಘ್ರದಲ್ಲೇ ವಿಶ್ವದ ಮೂರನೆಯ ಆರ್ಥಿಕ ಶಕ್ತಿಯನ್ನಾಗಿಸಲಾಗುವುದು ಎಂದೂ ಅವರು ಭರವಸೆ ನೀಡಿದರು. ಬ್ಯಾಂಕಿಂಗ್ ವಲಯದ ಸುಧಾರಣೆ ಹಾಗೂ ಯುವಕರ ಕೌಶಲಾಭಿವೃದ್ಧಿಗೆ ಗಮನ ಕೇಂದ್ರೀಕರಿಸಿರುವ ಭಾರತ ಸರಕಾರದ ನಡೆಯನ್ನು ಅವರು ಶ್ಲಾಘಿಸಿದರು.
ತಲೆಗೆ ಬಹುವರ್ಣದ ಪೇಟಾ ತೊಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಕೆಂಪು ಕೋಟೆಯ ಮೇಲಿಂದ ದೇಶವನ್ನುದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು, ವಿದೇಶಿ ಅತಿಥಿಗಳು ಉಪಸ್ಥಿತರಿದ್ದರು.