76ನೇ ಗಣರಾಜ್ಯೋತ್ಸವ ಮೆರವಣಿಗೆ ಕರ್ತವ್ಯಪಥದಲ್ಲಿ ದೇಶದ ಸಾಂಸ್ಕೃತಿಕ, ಮಿಲಿಟರಿ ಶಕ್ತಿಯ ಅನಾವರಣ

PC : PTI
ಹೊಸದಿಲ್ಲಿ: ಭಾರತವು ರವಿವಾರ ತನ್ನ 76ನೇ ಗಣರಾಜ್ಯೋತ್ಸವವನ್ನು ಆಚರಿಸಿತು. ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನವು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ಮಿಲಿಟರಿ ಶಕ್ತಿಯನ್ನು ಅನಾವರಣಗೊಳಿಸಿತು.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಸಚಿವಾಲಯಗಳು ಮತ್ತು ತ್ರಿಸೇನಾಪಡೆಗಳು ಸೇರಿಂತೆ 31 ಟ್ಯಾಬ್ಲೊಗಳು ಪರೇಡ್ಲ್ಲಿ ಪಾಲ್ಗೊಂಡಿದ್ದವು. ವಾಯುಪಡೆಯ ವಿಮಾನಗಳು ಬಾನಂಗಳದಲ್ಲಿ ಆಕರ್ಷಕವಾದ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಧ್ವಜವನ್ನು ಅರಳಿಸಿದ ಆನಂತರ 21 ಕುಶಾಲತೋಪುಗಳ ಮೊಳಗುವಿಕೆಯೊಂದಿಗೆ ರಾಷ್ಟ್ರಗೀತೆಯನ್ನು ಹಾಡಲಾಯಿತು.ಇಂಡೊನೇಶ್ಯ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪಗುಚ್ಛ ಇರಿಸುವುದರೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
‘ಸ್ವರ್ಣಭಾರತದ ಶಿಲ್ಪಿ’ಗಳು ಎಂದು ಕರೆಯಲಾದ ಸುಮಾರು 10 ಸಾವಿರ ಮಂದಿ ವಿಶೇಷ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿವಿಧ ಕ್ಷೇತ್ರಗಳಲ್ಲಿ ಉತ್ಕೃಷ್ಟ ಸಾಧನೆಗೈದ ಹಾಗೂ ಸರಕಾರದ ಯೋಜನೆಗಳನ್ನು ಅತ್ಯುತ್ತಮವಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಇವರಲ್ಲಿ ಸೇರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿವಿಧ ಕೇಂದ್ರ ಸಚಿವರುಗಳು, ಹಿರಿಯ ಸೇನಾಧಿಕಾರಿಗಳು, ವಿದೇಶಿ ರಾಜತಾಂತ್ರಿಕರು ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
►ಗಣರಾಜ್ಯೋತ್ಸವ ಪರೇಡ್ ವಿಶೇಷ
► ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂಡೊನೇಶ್ಯ ಪ್ರಧಾನಿ ಪ್ರಬೊವೊ ಸುಬಿಯಾಂತೊ ಅವರೊಂದಿಗೆ ಸಾಂಪ್ರಾದಾಯಿಕ ಕುದುರೆ ಸಾರೋಟು ‘ ಬಗ್ಗಿ’ಯಲ್ಲಿ ಆಗಮಿಸಿದರು.
► ಲೆಫ್ಟಿನೆಂಟ್ ಜನರಲ್ ಭವನೀಶ್ ಕುಮಾರ್ ಅವರು ಪರೇಡ್ ನ ನೇತೃತ್ವ ವಹಿಸಿದ್ದರು.
► ಪರಮವೀರಚಕ್ರ ಹಾಗೂ ಅಶೋಕಚಕ್ರ ಸೇರಿದಂತೆ ಅತ್ಯುನ್ನತ ಶೌರ್ಯ ಪುರಸ್ಕಾರ ವಿಜೇತರು ಪರೇಡ್ ನಲ್ಲಿ ಗಮನಸೆಳೆದರು.
► ಭಾರತೀಯ ಸೇನಾಪಡೆಯ ಅತ್ಯಾಧುನಿಕ ಬ್ರಹ್ಮೋಸ್, ಪಿನಾಕ, ಆಕಾಶ್ ಕ್ಷಿಪಣಿ ಹಾಗೂ ಡಿಆರ್ಡಿಓದ ನೆಲದಿಂದ ನೆಲಕ್ಕೆ ಎಸೆಯುವ ಪ್ರಳಯ್ ಕ್ಷಿಪಣಿಗಳ ಮತ್ತು ಸಮರ ಕಣ್ಗಾವಲು ವ್ಯವಸ್ಥೆ ‘ಸಂಜಯ್’ ಸೇರಿದಂತೆ ವಿವಿಧ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪ್ರದರ್ಶನವು ಗಮನಸೆಳೆಯಿತು.
► ಟಿ-90 ಭೀಷ್ಮ ಸೇನಾ ಟ್ಯಾಂಕ್, ನಾಗ್ ಕ್ಷಿಪಣಿ ವ್ಯವಸ್ಥೆ, ಹಾಗೂ ಬಹುನಳಿಗೆಯ ರಾಕೆಟ್ ಲಾಂಚರ್ ವ್ಯವಸ್ಥೆ ಅಗ್ನಿಬಾಣ್ ಇತ್ಯಾದಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಲಾಯಿತು.
► ಪ್ರಪ್ರಥಮ ಬಾರಿಗೆ ಮೂರು ಸಶಸ್ತ್ರಪಡೆಗಳ ಟ್ಯಾಬ್ಲೊವನ್ನು ಪ್ರದರ್ಶಿಸಲಾಗಿದ್ದು, ಸಶಸ್ತ್ರಪಡೆಗಳ ನಡುವೆ ಸಮನ್ವಯತೆಯ ಸಂದೇಶವನ್ನು ಸಾರಿತು. ಅರ್ಜುನ ಸಮರ ಟ್ಯಾಂಕ್,ತೇಜಸ್ ಫೈಟರ್ ವಿಮಾನ ಹಾಗೂ ಅತ್ಯಾಧುನಿಕ ಲಘು ಹೆಲಿಕಾಪ್ಟರ್ಗಳು ಮತ್ತು ರಿಮೋಟ್ ಪೈಲಟ್ ವಿಮಾನದೊಂದಿಗೆ ನೆಲ, ಜಲ ಹಾಗೂ ಆಗಸದಲ್ಲಿ ಜಂಟಿ ಕಾರ್ಯಾಚರಣೆಯನ್ನು ನಡೆಸುವ ಯುದ್ಧಭೂಮಿ ಸನ್ನಿವೇಶವನ್ನು ಪ್ರದರ್ಶಿಸಲಾಯಿತು.
► ‘ಸಶಕ್ತ ಹಾಗೂ ಸುರಕ್ಷಿತ ಭಾರತ ’ತ್ರಿಸೇನಾ ಪಡೆಗಳ ಸ್ತಬ್ಧಚಿತ್ರದ ಥೀಮ್ ಆಗಿತ್ತು.
► ಸಂವಿಧಾನ ಜಾರಿಗೊಂಡು 75 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಈ ಸಲದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪ್ರದರ್ಶನಗೊಂಡ ಪರೇಡ್ ನಲ್ಲಿ ಪಾಲ್ಗೊಂಡ ಸ್ತಬ್ಧಚಿತ್ರಗಳಿಗೆ ಸ್ವರ್ಣಿಮಾ ಭಾರತ್: ವಿರಾಸತ್ ಔರ್ ವಿಕಾಸ್’ಥೀಮ್, ಆಗಿತ್ತು. ಉತ್ತರಪ್ರದೇಶದ ಟ್ಯಾಬ್ಲೊ ಮಹಾಕುಂಭಮೇಳದ ವೈಭವವನ್ನು ಪ್ರಸ್ತುತಪಡಿಸಿದರೆ, ಮಧ್ಯಪ್ರದೇಶವು ಭಾರತಕ್ಕೆ ಚಿರತೆಗಳ ಐತಿಹಾಸಿಕ ಪುನಾರಗಮನವನ್ನು ಪ್ರದರ್ಶಿಸಿದವು. ಗೋವಾ, ಪಶ್ಚಿಮಬಂಗಾಳ, ದಿಲ್ಲಿ ಹಾಗೂ ಹರ್ಯಾಣ ಮತ್ತಿತರ ರಾಜ್ಯಗಳ ಟ್ಯಾಬ್ಲೊಗಳು ಪರೇಡ್ ನಲ್ಲಿ ಭಾಗವಹಿಸಿ ದೇಶದ ಸಾಂಸ್ಕೃತಿಕ ಹಾಗೂ ಜಾನಪದ ವೈಭವಕ್ಕೆ ಸಾಕ್ಷಿಯಾದವು.
► 5 ಸಾವಿರಕ್ಕೂ ಅಧಿಕ ಜಾನಪದ ಹಾಗೂ ಬುಡಕಟ್ಟು ಕಲಾವಿದರು ದೇಶದ ವಿವಿಧ ಭಾಗಗಳ 45 ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದರು.
► ಕ್ಯಾಪ್ಟನ್ ಡಿಂಪಲ್ ಸಿಂಗ್ ಭಾಟಿ ಅವರು ಚಲಿಸುತ್ತಿರುವ ಮೋಟಾರ್ಸೈಕಲ್ಗೆ ಜೋಡಿಸಲಾದ 12 ಅಡಿ ಎತ್ತರದ ಏಣಿಯನ್ನೇರಿ ರಾಷ್ಟ್ರಪತಿಯವರಿಗೆ ಗೌರವವಂದನೆ ಸಲ್ಲಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಮಹಿಳಾ ಅಧಿಕಾರಿಯಾಗಿ ಜಾಗತಿಕ ಇತಿಹಾಸವನ್ನು ಸ್ಥಾಪಿಸಿದರು.
► ಇಂಡೊನೇಶ್ಯದ 353 ಯೋಧರ ಸೇನಾ ತುಕಡಿ ಕೂಡಾ ಪರೇಡ್ ನಲ್ಲಿ ಪಾಲ್ಗೊಂಡಿದ್ದವು.
► 148 ಸಿಆರ್ಪಿಎಫ್ ಮಹಿಳಾ ಯೋಧರ ತುಕಡಿಯೂ ಗಮನಸೆಳೆಯಿತು.