ಪಾಕಿಸ್ತಾನದ ಜೈಲಿನಿಂದ 80 ಮಂದಿ ಮೀನುಗಾರರ ಬಿಡುಗಡೆ
Photo : NDTV
ಅಹಮದಾಬಾದ್: ಪಾಕಿಸ್ತಾನದ ಕರಾಚಿಯ ಜೈಲಿನಿಂದ ಬಿಡುಗಡೆಯಾಗಿರುವ 80 ಮೀನುಗಾರರು ರೈಲಿನ ಮೂಲಕ ರವಿವಾರ ಗುಜರಾತ್ ನ ವಡೋದರಾಕ್ಕೆ ತಲುಪಿದ್ದಾರೆ.
ಅಲ್ಲಿಂದ ಅವರನ್ನು ಬಸ್ ಮೂಲಕ ಗುಜರಾತ್ ಗಿರ್ ಸೋಮನಾಥ್ ಜಿಲ್ಲೆಯ ವೆರಾವಲ್ ಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಅಧಿಕಾರಿಗಳು ಈ ಮೀನುಗಾರರನ್ನು ಗುರುವಾರ ಬಿಡುಗಡೆ ಮಾಡಿದ್ದರು. ಮರುದಿನ ಪಂಜಾಬ್ ನ ಅತ್ತಾರಿ-ವಾಘಾ ಗಡಿಯಲ್ಲಿ ಅವರನ್ನು ಗುಜರಾತ್ ಮೀನುಗಾರಿಕೆ ಇಲಾಖೆಯ ತಂಡಕ್ಕೆ ಹಸ್ತಾಂತರಿಸಲಾಗಿತ್ತು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಈ ಮೀನುಗಾರರು 2020ರಲ್ಲಿ ಗುಜರಾತ್ ಕರವಾಳಿಯಿಂದ ಮೀನುಗಾರಿಕೆಗೆ ತೆರಳಿದ್ದರು. ತಮ್ಮ ದೇಶದ ಜಲ ಭಾಗದಲ್ಲಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ಪಾಕಿಸ್ತಾನದ ನೌಕಾ ಪಡೆ ಇವರನ್ನು ವಶಕ್ಕೆ ಪಡೆದುಕೊಂಡಿತ್ತು.
ಬಿಡುಗಡೆಯಾದಿರುವ 80 ಮೀನುಗಾರರಲ್ಲಿ 59 ಮಂದಿ ಗಿರ್ ಸೋಮನಾಥ್ ಜಿಲ್ಲೆಯವರು, 15 ಮಂದಿ ದ್ವಾರಕದವರು, ಇಬ್ಬರು ಜಾಮ್ ನಗರದವರು ಹಾಗೂ ಒಬ್ಬರು ಅಮ್ರೇಲಿಯವರು. ಮೂವರು ಕೇಂದ್ರಾಡಳಿತ ಪ್ರದೇಶ ದೀವ್ ನವರು.
ʻʻ ಎಲ್ಲರನ್ನೂ 2020ರಲ್ಲಿ ಬಂಧಿಸಲಾಗಿತ್ತು. ಸುಮಾರು 200 ಮೀನುಗಾರರು ಈಗಲೂ ಪಂಜಾಬ್ ನ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಬಿಡುಗಡೆಗೊಂಡ 80 ಮಂದಿ ಮೀನುಗಾರರು ಈ ಬಾರಿ ತಮ್ಮ ಕುಟುಂಬದೊಂದಿಗೆ ದೀಪಾವಳಿ ಆಚರಿಸಲಿದ್ದಾರೆ ʻʻ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.
ಈ ವರ್ಷ ಮೇ ಹಾಗೂ ಜೂನ್ ನಲ್ಲಿ ಪಾಕಿಸ್ತಾನ ಸರಕಾರ ಸುಮಾರು 400 ಮಂದಿ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿತ್ತು.