ಕೋವಿಡ್-19 ಸಮಯದಲ್ಲಿ ಶೇ. 80 ರಷ್ಟು ಪತ್ರಕರ್ತರ ಬಲವಂತದ ವಜಾ: ಪ್ರೆಸ್ ಕೌನ್ಸಿಲ್ ಸಮಿತಿ ವರದಿ
Photo: X/PressCouncil_IN
ಹೊಸದಿಲ್ಲಿ: ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಹೆಚ್ಚಿನ ಪತ್ರಕರ್ತರಿಗೆ ರಾಜೀನಾಮೆ ನೀಡಲು ಮತ್ತು ಸ್ವಯಂ ನಿವೃತ್ತಿಗೆ ಒತ್ತಾಯಿಸಲಾಗಿದೆ, ಇದಲ್ಲದೆ ಕೆಲ ಸಂಸ್ಥೆಗಳು ಪತ್ರಕರ್ತರನ್ನು ಸ್ಪಷ್ಟ ಕಾರಣ ನೀಡದೆ ಬಲವಂತವಾಗಿ ವಜಾಗೊಳಿಸಿದೆ ಎಂಬ ಅಂಶವನ್ನು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ.
COVID-19 ಸಾಂಕ್ರಾಮಿಕ ಸಮಯದಲ್ಲಿ ವಿವಿಧ ಮಾಧ್ಯಮ ಸಮೂಹದಿಂದ ಪತ್ರಕರ್ತರನ್ನು ಪದಚ್ಯುತಿಗೊಳಿಸಿರುವ ಕುರಿತು ಅಧ್ಯಯನ ಮಾಡಲು ಸಮಿತಿಯನ್ನು ಭಾರತೀಯ ಪ್ರೆಸ್ ಕೌನ್ಸಿಲ್ ಈ ಮೊದಲು ರಚಿಸಿತ್ತು. ಸಮಿತಿಯು ಪಿಸಿಐ ಸದಸ್ಯರಾದ ಗುರ್ಬೀರ್ ಸಿಂಗ್, ಎಲ್ ಎಸ್ ಭಾರ್ತಿಯಾ, ಪ್ರಕಾಶ್ ನಂದಾ ಚೌಧರಿ, ಜೆ ಎಸ್ ರಜಪೂತ್ ಮತ್ತು ಹಿರಿಯ ಪತ್ರಕರ್ತರಾದ ಪಿ ಸಾಯಿನಾಥ್ ಮತ್ತು ಸ್ನೇಹಸಿಸ್ ಸುರ್ ಅವರನ್ನು ಒಳಗೊಂಡಿತ್ತು.
ʼಕೋವಿಡ್-19 ಸಮಯದಲ್ಲಿ ಮಾಧ್ಯಮ ಸಮೂಹದಿಂದ ಪತ್ರಕರ್ತರ ಪದಚ್ಯುತಿʼ ಎಂಬ ತಲೆಬರಹದಡಿಯ ವರದಿಯನ್ನು ಸಿದ್ದಪಡಿಸಲಾಗಿದೆ. ಇಂಗ್ಲಿಷ್, ಹಿಂದಿ, ಮರಾಠಿ, ಬಂಗಾಳಿ ಭಾಷೆಗಳ 17 ಸುದ್ದಿ ಸಂಸ್ಥೆಗಳ ಪತ್ರಕರ್ತರ ಪದಚ್ಯುತಿ ಬಳಿಕ ಅಭಿಪ್ರಾಯವನ್ನು ಪಡೆದು ವರದಿಯನ್ನು ಸಿದ್ದಪಡಿಸಲಾಗಿದೆ.
ಸಮಿತಿಯ ಮುಂದೆ ಹಾಜರಾದ ಶೇಕಡಾ 80ರಷ್ಟು ಪತ್ರಕರ್ತರು ತಮ್ಮನ್ನು ಬಲವಂತವಾಗಿ ರಾಜೀನಾಮೆ ನೀಡುವಂತೆ, ಸ್ವಯಂ ನಿವೃತ್ತಿ ಪಡೆದುಕೊಳ್ಳುವಂತೆ ಕೇಳಲಾಯಿತು ಕೊನೆಗೆ ತಮ್ಮ ಸ್ಥಾನದಿಂದ ವಜಾಗೊಳಿಸಲಾಯಿತು ಎಂದು ಹೇಳಿದ್ದಾರೆ.
ಪಿಸಿಐನ ಮಾಜಿ ಸದಸ್ಯ ಬಲ್ವಿಂದರ್ ಸಿಂಗ್ ಜಮ್ಮು ಮತ್ತು ಸ್ವತಂತ್ರ ಪತ್ರಕರ್ತ ಸಿರಿಲ್ ಸ್ಯಾಮ್ ಅವರ ಅಂದಾಜಿನ ಪ್ರಕಾರ, ಸುಮಾರು 2,300-2,500 ಮಂದಿಯನ್ನು ವಜಾಗೊಳಿಸಲಾಗಿದೆ. ಆದರೆ, ಅಂಕಿ-ಅಂಶವನ್ನು ಹೆಚ್ಚಾಗಿ ಇಂಗ್ಲಿಷ್ ಭಾಷಾ ಮಾಧ್ಯಮಕ್ಕೆ ಸೀಮಿತಗೊಳಿಸಿ ಸಿದ್ದಪಡಿಸಿರುವುದರಿಂದ ನಿಜವಾದ ಅಂಕಿ-ಅಂಶಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ವಜಾಗೊಂಡವರಲ್ಲಿ ಸುಮಾರು ಶೇ. 80 ರಷ್ಟು ಜನರು ಮೂರು ಪ್ರಮುಖ ಪ್ರಕಾಶಕರಿಗೆ ಸಂಬಂಧಿಸಿದವರಾಗಿದ್ದಾರೆ. ಬೆನೆಟ್ ಕೋಲ್ಮನ್ ಮತ್ತು ಕಂಪನಿ ಲಿಮಿಟೆಡ್ನಿಂದ 19 ಮಂದಿ, HT ಮೀಡಿಯಾದಿಂದ 14 ಮಂದಿ ಮತ್ತು ʼದಿ ಹಿಂದೂ ಪಬ್ಲಿಷಿಂಗ್ ಗ್ರೂಪ್ʼನಿಂದ 8 ಮಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇದರಲ್ಲಿ ಹೊಸದಿಲ್ಲಿ ಮತ್ತು ಮುಂಬೈ ಮೂಲದ ಇಂಗ್ಲಿಷ್ ಭಾಷೆಯ ಸುದ್ದಿ ಮಾಧ್ಯಮದ ಪತ್ರಕರ್ತರ ವಜಾ ಹೆಚ್ಚಿನ ಸಂಖ್ಯೆಯಲ್ಲಿ ಮಾಡಲಾಗಿದೆ.
ಪದಚ್ಯುತಗೊಂಡ ಪತ್ರಕರ್ತರಲ್ಲಿ ಶೇಕಡಾ 25 ರಷ್ಟು ಮಾತ್ರ ಈ ಬಗ್ಗೆ ತಮ್ಮ ಕಂಪನಿಗಳಿಂದ ಔಪಚಾರಿಕ ಇಮೇಲ್ಗಳನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದ್ದಾರೆ. ಸುಮಾರು ಶೇ. 75 ಪ್ರಕರಣಗಳಲ್ಲಿ, ಪದಚ್ಯುತಿಗೆ ಸಂಬಂಧಿಸಿದ ಎಲ್ಲಾ ಸಂವಹನಗಳು ಮೌಖಿಕವಾಗಿತ್ತು. ಶೇ. 80 ರಷ್ಟು ಪತ್ರಕರ್ತರಲ್ಲಿ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಯಿತು ಮತ್ತು ಸಂಬಳ ಕಡಿತ ಮತ್ತು ಹಿಂಬಡ್ತಿಗಳ ಬಗ್ಗೆ ಯಾವುದೇ ಮುಂಗಡ ಸೂಚನೆ ಅಥವಾ ಔಪಚಾರಿಕ ಮಾತುಕತೆಯನ್ನು ಅವರ ಜೊತೆ ನಡೆಸಿರಲಿಲ್ಲ ಎಂದು ಸಮಿತಿಯ ಮುಂದೆ ಹೇಳಿದ್ದಾರೆ.
ಪತ್ರಕರ್ತೆ ಕವಿತಾ ಅಯ್ಯರ್, ಪ್ರಸ್ತುತ ಸ್ವತಂತ್ರ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಜುಲೈ 27, 2020 ರಂದು ʼದಿ ಇಂಡಿಯನ್ ಎಕ್ಸ್ಪ್ರೆಸ್ʼ ನ ಮುಂಬೈ ಬ್ಯೂರೋದಿಂದ ವಜಾಗೊಳಿಸಲಾಗಿತ್ತು. ಅವರು 18 ವರ್ಷಗಳ ಕಾಲ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಅಯ್ಯರ್ ಅವರಿಗೆ ಮೀಟಿಂಗ್ ಒಂದರಲ್ಲಿ ನಿವೃತ್ತಿ ಪಡೆದುಕೊಳ್ಳುವಂತೆ ಕೋರಲಾಗಿದೆ. ಸಭೆಗೆ ಆಕೆಗೆ ಫೋನ್ ಕೊಂಡೊಯ್ಯಲು ಅನುಮತಿ ನೀಡಿರಲಿಲ್ಲ. ಮೀಟಿಂಗ್ ನಲ್ಲಿ ಅವರು ರಾಜೀನಾಮೆ ನೀಡಬೇಕು ಇಲ್ಲವಾದರೆ ವಜಾಗೊಳಿಸುವುದಾಗಿ ಬೆದರಿಸಿದ್ದಾರೆ ಎಂದು ಹೇಳಿದ್ದಾರೆ.
ಹೊಸದಿಲ್ಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಸಮಿತಿಯ ಮುಂದೆ ಪದಚ್ಯುತಗೊಂಡ ಬಹುತೇಕ ಎಲ್ಲಾ ಪತ್ರಕರ್ತರು ಇದೇ ರೀತಿಯ ಅನುಭವವನ್ನು ಹಂಚಿಕೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ʼದಿ ಹಿಂದೂʼನಿಂದ ವಜಾಗೊಂಡ ಆಶಿಶ್ ರುಖೈಯಾರ್ ಆ.3, 2020ರಂದು LinkedIn ನಲ್ಲಿ ಈ ಕುರಿತು ಪತ್ರವೊಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ವರದಿಗಾರರನ್ನು ಫೋನ್ ಸಂಭಾಷನೆಯಲ್ಲೇ ತೆಗೆದು ಹಾಕಲಾಗಿದೆ. ಕೆಲವರನ್ನು ಕಚೇರಿಗೆ ಕರೆದು ರಾಜೀನಾಮೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ರಾಜೀನಾಮೆ ನೀಡದಿದ್ದರೆ, ಕಾನೂನು ಬದ್ಧವಾಗಿ ಸಿಗಬೇಕಿರುವ ಪಾವತಿಗಳನ್ನು ಕೂಡ ನೀಡುವುದಿಲ್ಲ ಎಂದು ಬೆದರಿಸಿದ್ದರು ಎಂದು ಆರೋಪಿಸಿದ್ದಾರೆ.
ಮುಂಬೈ ಮಿರರ್ನಲ್ಲಿ ಉದ್ಯೋಗಿಯಾಗಿರುವ ಛಾಯಾಗ್ರಾಹಕ ದೀಪಕ್ ತುರ್ಭೇಕರ್ ಇದೇ ರೀತಿಯ ಅನುಭವವನ್ನು ಹಂಚಿಕೊಂಡಿದ್ದು, ನನಗೆ ಕಚೇರಿಯ ಎಚ್ ಆರ್ ವಾಟ್ಸಾಪ್ ಕರೆ ಮೂಲಕ ರಾಜೀನಾಮೆಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. ನಾನು ರಾಜೀನಾಮೆ ನೀಡದಿದ್ದರೆ ತೆಗೆದು ಹಾಕುವುದಾಗಿ ಬೆದರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ನಮ್ಮನ್ನು ವಜಾಗೊಳಿಸಿರುವುದು ನಮ್ಮ ಮೇಲೆ ದೊಡ್ಡ ಮಟ್ಟದಲ್ಲಿ ಆರ್ಥಿಕ ಪ್ರಾಭಾವವನ್ನು ಬೀರಿದೆ, ಸಾಲ ಮಾಡುವಂತೆ ಪ್ರೇರೇಪಿಸಿದೆ ಎಂದು ಪದಚ್ಯುತಗೊಂಡವರಲ್ಲಿ ಶೇ. 80 ರಷ್ಟು ಪತ್ರಕರ್ತರು ಸಮಿತಿಯ ಮುಂದೆ ಹೇಳಿಕೊಂಡಿದ್ದಾರೆ.
ಕೃಪೆ: thewire.in