ರೂ. 1 ಕೋಟಿಗೂ ಹೆಚ್ಚು ವೇತನ: ಐಐಟಿ ಬಾಂಬೆಯ 85 ವಿದ್ಯಾರ್ಥಿಗಳಿಗೆ ಆಫರ್
Photo: PTI
ಹೊಸದಿಲ್ಲಿ: 2023-24ರ ಪ್ರಥಮ ಹಂತದಲ್ಲಿ ಐಐಟಿ ಬಾಂಬೆಯ 85 ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. ಒಂದು ಕೋಟಿಗೂ ಹೆಚ್ಚು ವೇತನದ ಉದ್ಯೋಗದ ಕರೆ ದೊರೆತಿದೆ. ಈ ಉದ್ಯೋಗ ನೇಮಕಾತಿ ಅಭಿಯಾನದಲ್ಲಿ ಒಟ್ಟು 388 ಸ್ವದೇಶಿ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳು ಭಾಗವಹಿಸಿದ್ದವು ಎಂದು ndtv.com ವರದಿ ಮಾಡಿದೆ.
ಡಿಸೆಂಬರ್ 20, 2023ರಲ್ಲಿ 1,188 ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಉದ್ಯೋಗ ನೇಮಕಾತಿಯಾಗಿದೆ. ಈ ಅಂಕಿಸಂಖ್ಯೆಯಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಸಾರ್ವಜನಿಕ ಉದ್ಯಮಗಳಲ್ಲಿ ನೇಮಕಾತಿ ಪಡೆದಿದ್ದರೆ, 297 ವಿದ್ಯಾರ್ಥಿಗಳು ಇಂಟರ್ನ್ ಶಿಪ್ ಮೂಲಕ ಪೂರ್ವ ಉದ್ಯೋಗ ನೇಮಕಾತಿಯ ಕರೆಯನ್ನು ಪಡೆದಿದ್ದಾರೆ. ಈ ಪೈಕಿ 258 ವಿದ್ಯಾರ್ಥಿಗಳು ಉದ್ಯೋಗ ನೇಮಕಾತಿ ಕರೆಯನ್ನು ಅಂಗೀಕರಿಸಿದ್ದಾರೆ.
ಅಕ್ಸೆಂಚರ್, ಏರ್ ಬಸ್, ಆ್ಯಪಲ್, ಬಾರ್ಕ್ಲೇಸ್, ಗೂಗಲ್, ಜೆಪಿ ಮೋರ್ಗನ್ ಚೇಸ್, ಮೈಕ್ರೊಸಾಫ್ಟ್, ಟಾಟಾ ಸಮೂಹ ಹಾಗೂ ಇನ್ನಿತರ ಪ್ರಮುಖ ನೇಮಕಾತಿ ಸಂಸ್ಥೆಗಳು ನೇಮಕಾತಿ ಪ್ರಕ್ರಿಯೆ ಭಾಗವಾಗಿದ್ದವು. ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಐಟಿ/ಸಾಫ್ಟ್ ವೇರ್, ಹಣಕಾಸು/ಬ್ಯಾಂಕಿಂಗ್/ಹಣಕಾಸು ತಂತ್ರಜ್ಞಾನ, ವ್ಯವಸ್ಥಾಪಕ ಸಮಾಲೋಚನೆ, ದತ್ತಾಂಶ ವಿಜ್ಞಾನ ಮತ್ತು ವಿಶ್ಲೇಷಣೆಗಳು, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವಿನ್ಯಾಸ ವಲಯಗಳಲ್ಲಿ ಅತಿ ಹೆಚ್ಚು ನೇಮಕಾತಿ ನಡೆದಿದೆ.
ಜಪಾನ್, ತೈವಾನ್, ದಕ್ಷಿಣ ಕೊರಿಯಾ, ದ ನೆದರ್ ಲ್ಯಾಂಡ್ಸ್, ಸಿಂಗಪೂರ್ ಹಾಗೂ ಹಾಂಗ್ ಕಾಂಗ್ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಸ್ಥಳಗಳಲ್ಲಿ 63 ಉದ್ಯೋಗಕ್ಕಾಗಿ ಕರೆ ಬಂದಿದೆ. ನೇಮಕಾತಿ ಸಂಸ್ಥೆಗಳು ಅಭ್ಯರ್ಥಿಗಳೊಂದಿಗೆ ವೈಯಕ್ತಿಕವಾಗಿ ಅಥವಾ ವರ್ಚುಯಲ್ ಸಭೆ ವೇದಿಕೆಗಳ ಮೂಲಕ ಸಂವಾದ ನಡೆಸಿದವು. ವಿದ್ಯಾರ್ಥಿಗಳು ತಮಗೆ ನಿಯೋಜಿಸಿದ್ದ ಸ್ಥಳಗಳಿಂದ ಸಂದರ್ಶನದಲ್ಲಿ ಪಾಲ್ಗೊಂಡರು.