9 ಕಲ್ಲಿದ್ದಲು ನಿಕ್ಷೇಪ ವಿತರಣೆಯಲ್ಲಿ ಅವ್ಯವಹಾರ ಪ್ರಕರಣ: ಮಾಜಿ ರಾಜ್ಯಸಭಾ ಸದಸ್ಯ ಸೇರಿದಂತೆ 7 ಮಂದಿ ದೋಷಿ
ವಿಜಯ್ ದರ್ದ | Photo : PTI
ಹೊಸದಿಲ್ಲಿ: ಛತ್ತೀಸ್ಗಢದಲ್ಲಿ ಕಲ್ಲಿದ್ದಲು ನಿಕ್ಷೇಪದ ವಿತರಣೆಯಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ, ಮಾಜಿ ರಾಜ್ಯಸಭಾ ಸದಸ್ಯ ವಿಜಯ್ ದರ್ದ ಮತ್ತು ಮಾಜಿ ಕಲ್ಲಿದ್ದಲು ಕಾರ್ಯದಶಿ ಎಚ್.ಸಿ. ಗುಪ್ತ ಸೇರಿದಂತೆ ಏಳು ಆರೋಪಿಗಳು ದೋಷಿಗಳು ಎಂಬುದಾಗಿ ದಿಲ್ಲಿ ನ್ಯಾಯಾಲಯವೊಂದು ಗುರುವಾರ ಘೋಷಿಸಿದೆ.
ಛತ್ತೀಸ್ಗಢದ ಫತೇಪುರ್ (ಪೂರ್ವ) ಕಲ್ಲಿದ್ದಲು ನಿಕ್ಷೇಪವನ್ನು ಜೆಎಲ್ಡಿ ಯವತ್ಮಾಲ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಗೆ ವಿತರಿಸಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
1999ರಿಂದ 2005ರವರೆಗೆ ನಾಲ್ಕು ಕಲ್ಲಿದ್ದಲು ನಿಕ್ಷೇಪಗಳನ್ನು ತನ್ನ ಗುಂಪಿನ ಕಂಪೆನಿಗಳಿಗೆ ನೀಡಲಾಗಿತ್ತು ಎಂಬ ಸಂಗತಿಯನ್ನು ಜೆಎಲ್ಡಿ ಯವತ್ಮಾಲ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಬಚ್ಚಿಟ್ಟಿತ್ತು ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಪ್ರಥಮ ಮಾಹಿತಿ ವರದಿಯಲ್ಲಿ ಆರೋಪಿಸಿತ್ತು.
ಪ್ರಕರಣದಲ್ಲಿ ದೋಷಿಗಳೆಂಬುದಾಗಿ ಪರಿಗಣಿಸಲ್ಪಟ್ಟ ಇತರರೆಂದರೆ ವಿಜಯ್ ದರ್ದರ ಪುತ್ರ ದೇವೇಂದ್ರ ದರ್ದ, ಹಿರಿಯ ಅಧಿಕಾರಿಗಳಾದ ಕೆ.ಎಸ್. ಕ್ರೋಫ ಮತ್ತು ಕೆ.ಸಿ. ಸಮ್ರಿಯ, ಜೆಎಲ್ಡಿ ಯವತ್ಮಾಲ್ ಎನರ್ಜಿ ಕಂಪೆನಿ ಮತ್ತು ಅದರ ನಿರ್ದೇಶಕ ಮನೋಜ್ ಕುಮಾರ್ ಜಯಸ್ವಾಲ್. ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ದರ್ದ, 1998 ಮತ್ತು 2016ರ ನಡುವಿನ ಅವಧಿಯಲ್ಲಿ ಸತತ ಮೂರು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ದೋಷಿಗಳ ಶಿಕ್ಷೆಯ ಪ್ರಮಾಣದ ಕುರಿತ ವಾದಗಳನ್ನು ನ್ಯಾಯಾಲಯವು ಜುಲೈ 18ರಂದು ಆಲಿಸಲಿದೆ.
ಕಲ್ಲಿದ್ದಲು ಹಗರಣವು ಯುಪಿಎ ಸರಕಾರದ ಎರಡನೇ ಅವಧಿಯಲ್ಲಿ ಬೆಳಕಿಗೆ ಬಂದಿತ್ತು. 2004 ಮತ್ತು 2009ರ ನಡುವಿನ ಅವಧಿಯಲ್ಲಿ 194 ಕಲ್ಲಿದ್ದಲು ನಿಕ್ಷೇಪಗಳನ್ನು ಸರಕಾರಿ ಮತ್ತು ಖಾಸಗಿ ಕಂಪೆನಿಗಳಿಗೆ ಅಪಾರದರ್ಶಕ ರೀತಿಯಲ್ಲಿ ವಿತರಣೆ ಮಾಡಲಾಗಿತ್ತು ಎಂದು 2012 ಮಾರ್ಚ್ನಲ್ಲಿ ಮಹಾಲೆಕ್ಕಪಾಲರು ಆರೋಪಿಸಿದ್ದರು. ಇದರಿಂದಾಗಿ ದೇಶದ ಬೊಕ್ಕಸಕ್ಕೆ 10.6 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಆರಂಭದಲ್ಲಿ ಅವರು ಹೇಳಿದ್ದರು.
ಆದರೆ, ಬಳಿಕ ಅದನ್ನು ಪರಿಷ್ಕರಿಸಿದ ಮಹಾಲೆಕ್ಕಪಾಲರು, 2012 ಆಗಸ್ಟ್ನಲ್ಲಿ ಸಂಸತ್ಗೆ ಸಲ್ಲಿಸಿದ ತನ್ನ ಅಂತಿಮ ವರದಿಯಲ್ಲಿ ಆ ಸಂಖ್ಯೆಯನ್ನು 1.86 ಲಕ್ಷ ಕೋಟಿ ರೂ.ಗೆ ಇಳಿಸಿದರು.