90 ಗಂಟೆ ಕಳೆದರೂ ಇನ್ನೂ ಬಿಡುಗಡೆಯಾಗದ ಪಾಕ್ ರೇಂಜರ್ಗಳಿಂದ ಬಂಧಿತ ಬಿಎಸ್ಎಫ್ ಯೋಧ!

ಪೂರ್ಣಮ್ ಕುಮಾರ್ ಶಾ (Photo credit: X/@manaman_chhina)
ಹೊಸದಿಲ್ಲಿ : ಪಂಜಾಬ್ನ ಫಿರೋಝ್ಪುರದ ಬಳಿ ಆಕಸ್ಮಿಕವಾಗಿ ಅಂತಾರಾಷ್ಟ್ರೀಯ ಗಡಿ ದಾಟಿದ ಗಡಿ ಭದ್ರತಾ ಪಡೆ ಕಾನ್ಸ್ಟೆಬಲ್ ಅನ್ನು ಪಾಕಿಸ್ತಾನ ರೇಂಜರ್ಗಳು ಬಂಧಿಸಿ 90 ಗಂಟೆಗಳಿಗೂ ಅಧಿಕ ಸಮಯ ಕಳೆದಿದೆ. ಬಿಎಸ್ಎಫ್ ಮತ್ತು ಪಾಕಿಸ್ತಾನ ರೇಂಜರ್ಗಳ ನಡುವೆ ಮೂರು ಸುತ್ತಿನ ಫ್ಲಾಗ್ ಮೀಟಿಂಗ್ ನಡೆದಿದೆ. ಆದರೆ ಯೋಧನನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ ಎಂದು indiatoday ವರದಿ ಮಾಡಿದೆ.
ಬಿಎಸ್ಎಫ್ನ 182ನೇ ಬೆಟಾಲಿಯನ್ ಸದಸ್ಯ ಪೂರ್ಣಮ್ ಕುಮಾರ್ ಶಾ ಗಡಿ ಬಳಿ ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ಪಾಕಿಸ್ತಾನದ ಪ್ರದೇಶವನ್ನು ದಾಟಿದ್ದರು. ಆ ಸಮಯದಲ್ಲಿ ಅವರು ಸೇನಾ ಸಮವಸ್ತ್ರದಲ್ಲಿದ್ದರು ಮತ್ತು ಸೇವಾ ರೈಫಲ್ ಅನ್ನು ಹೊಂದಿದ್ದರು.
ಅಧಿಕಾರಿಗಳ ಪ್ರಕಾರ, ಪೂರ್ಣಮ್ ಕುಮಾರ್ ಶಾ ಅವರು ವಿಶ್ರಾಂತಿಗಾಗಿ ತೆರಳಿದಾಗ ಆಕಸ್ಮಿಕವಾಗಿ ಗಡಿಯನ್ನು ದಾಟಿದ್ದಾರೆ. ಈ ವೇಳೆ ಪಾಕಿಸ್ತಾನದ ರೇಂಜರ್ಗಳು ಅವರನ್ನು ಬಂಧಿಸಿದ್ದರು.
ಬಿಎಸ್ಎಫ್ ತಕ್ಷಣವೇ ಯೋಧನ ಬಿಡುಗಡೆಗೆ ಪ್ರಯತ್ನಗಳನ್ನು ಆರಂಭಿಸಿತ್ತು. ಪಾಕಿಸ್ತಾನದ ರೇಂಜರ್ಗಳೊಂದಿಗೆ ಸಭೆಗಳನ್ನು ನಡೆಸಿತ್ತು. ಆದರೆ ಅವರ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಪಾಕಿಸ್ತಾನದ ರೇಂಜರ್ಗಳು ಹೇಳಿದ್ದಾರೆ ಎನ್ನಲಾಗಿದೆ.
ʼಯೋಧನನ್ನು ವಾಪಸ್ ಕರೆತರುವ ಪ್ರಯತ್ನ ನಡೆಯುತ್ತಿದೆ. ಪಾಕಿಸ್ತಾನ ರೇಂಜರ್ಗಳೊಂದಿಗೆ ಮತ್ತೊಂದು ಸುತ್ತಿನ ಫೀಲ್ಡ್ ಕಮಾಂಡರ್ ಮಟ್ಟದ ಫ್ಲಾಗ್ ಮೀಟಿಂಗ್ಗೆ ಬಿಎಸ್ಎಫ್ ವಿನಂತಿಸಿದೆ. ಶೀಘ್ರದಲ್ಲೇ ಸಭೆ ನಡೆಯುವ ನಿರೀಕ್ಷೆಯಿದೆʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಬಿಎಸ್ಎಫ್ ಮಹಾನಿರ್ದೇಶಕ ದಲ್ಜಿತ್ ಚೌಧರಿ ಅವರು ಕೇಂದ್ರ ಗೃಹ ಕಾರ್ಯದರ್ಶಿಗೆ ಬೆಳವಣಿಗೆಗಳ ಬಗ್ಗೆ ವಿವರಿಸಿದ್ದರು.
ಘಟನೆ ಯೋಧನ ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ. ಪಶ್ಚಿಮ ಬಂಗಾಳ ಮೂಲದ ಪೂರ್ಣಮ್ ಕುಮಾರ್ ಶಾ ಅವರ ಕುಟುಂಬವು ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಅವರನ್ನು ವಾಪಾಸ್ಸು ಕರೆಸಿಕೊಳ್ಳುವಂತೆ ಸರಕಾರಕ್ಕೆ ಮನವಿ ಮಾಡಿಕೊಂಡಿದೆ.