2024ರಲ್ಲಿ ಸಾರ್ವಜನಿಕರ 90.5 ಶೇ. ದೂರುಗಳಿಗೆ ಪರಿಹಾರ: ಲೋಕಸಭೆಗೆ ಸರಕಾರ ಮಾಹಿತಿ

ಲೋಕಸಭೆ | PC : PTI
ಹೊಸದಿಲ್ಲಿ: 2024ರಲ್ಲಿ ವೆಬ್ಸೈಟೊಂದರ ಮೂಲಕ ಸ್ವೀಕರಿಸಲಾದ ಸಾರ್ವಜನಿಕರ 29 ಲಕ್ಷಕ್ಕೂ ಅಧಿಕ ದೂರುಗಳ ಪೈಕಿ ಸುಮಾರು 26.45 ಲಕ್ಷ ದೂರುಗಳನ್ನು ಪರಿಹರಿಸಲಾಗಿದೆ ಎಂದು ಲೋಕಸಭೆಗೆ ಬುಧವಾರ ತಿಳಿಸಲಾಗಿದೆ.
ದೂರುಗಳನ್ನು Centralised Public Grievance Redress and Monitoring System ನಲ್ಲಿ ಸ್ವೀಕರಿಸಲಾಗಿದೆ. ಸಾರ್ವಜನಿಕರು ಈ ವೆಬ್ಸೈಟ್ನಲ್ಲಿ ದೂರುಗಳನ್ನು ದಾಖಲಿಸಬಹುದಾಗಿದೆ.
‘‘2020-2024ರ ಅವಧಿಯಲ್ಲಿ ಒಟ್ಟು ಒಂದು ಕೋಟಿ 15 ಲಕ್ಷ 52 ಸಾವಿರದ 503 ದೂರುಗಳನ್ನು ಪರಿಹರಿಸಲಾಗಿದೆ. 2024 ಜನವರಿಯಿಂದ ಡಿಸೆಂಬರ್ವರೆಗಿನ ಅವಧಿಯಲ್ಲಿ 26 ಲಕ್ಷ 45 ಸಾವಿರದ 869 ದೂರುಗಳನ್ನು ಪರಿಹರಿಸಲಾಗಿದೆ. ಇದು ಸಾರ್ವಕಾಲಿಕ ವಾರ್ಷಿಕ ದಾಖಲೆಯಾಗಿದೆ’’ ಎಂದು ಲಿಖಿತ ಉತ್ತರದಲ್ಲಿ ಕೇಂದ್ರ ಸಿಬ್ಬಂದಿ ಖಾತೆ ಸಹಾಯಕ ಸಚಿವ ಜಿತೇಂದ್ರ ಸಿಂಗ್ ತಿಳಿಸಿದರು.
2023ರಲ್ಲಿ 26,15,798 ದೂರುಗಳನ್ನು ಸ್ವೀಕರಿಸಲಾಗಿತ್ತು ಮತ್ತು ಈ ಪೈಕಿ 23,07,674 ದೂರುಗಳನ್ನು ವಿಲೇವಾರಿ ಮಾಡಲಾಗಿತ್ತು ಎಂದು ಅವರು ತಿಳಿಸಿದರು.
ಸರಕಾರದ ನೀತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಾರ್ವಜನಿಕರ ದೂರುಗಳನ್ನು ಪರಿಹರಿಸಲು ಹೆಚ್ಚು ಸಮಯ ಬೇಕಾಗಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ತಿಳಿಸಿದರು.