2019ರಲ್ಲಿ ಭಾರತದಲ್ಲಿ ಕ್ಯಾನ್ಸರ್ ನಿಂದ ಮೃತಪಟ್ಟವರು 9.3 ಲಕ್ಷ ಮಂದಿ!
ಏಷ್ಯಾದಲ್ಲಿ ಎರಡನೇ ಸ್ಥಾನ : ಲ್ಯಾನ್ಸೆಟ್ ಅಧ್ಯಯನ
Photo: freepik
ಹೊಸದಿಲ್ಲಿ: ಭಾರತವು 2019ರಲ್ಲಿ ಸುಮಾರು 12 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿವೆ. 9.3 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಅಧ್ಯಯನ ವರದಿ ಹೇಳಿದೆ. ಈ ಮೂಲಕ ಆ ವರ್ಷದಲ್ಲಿ ಭಾರತವು ಏಶ್ಯಾದಲ್ಲಿ ಕ್ಯಾನ್ಸರ್ ಗೆ ಎರಡನೇ ಅತ್ಯಂತ ದೊಡ್ಡ ಕೊಡುಗೆಯನ್ನು ಸಲ್ಲಿಸಿದೆ ಎಂದು ದಿ ಲ್ಯಾನ್ಸೆಟ್ ರೀಜನಲ್ ಹೆಲ್ತ್ ಸೌಥ್ ಏಶ್ಯಾ ಜರ್ನಲ್ನಲ್ಲಿ ಪ್ರಕಟಗೊಂಡಿರುವ ನೂತನ ಅಧ್ಯಯನ ವರದಿಯು ತಿಳಿಸಿದೆ.
ಹೊಸ ಕ್ಯಾನ್ಸರ್ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಗೆ ಸಂಬಂಧಿಸಿದಂತೆ ಭಾರತ, ಚೀನಾ ಮತ್ತು ಜಪಾನ್ ಏಶ್ಯಾದಲ್ಲಿ ಮೂರು ಪ್ರಮುಖ ದೇಶಗಳಾಗಿವೆ. 2019ರಲ್ಲಿ 94 ಲಕ್ಷ ಹೊಸ ಪ್ರಕರಣಗಳು ಮತ್ತು 56 ಲಕ್ಷ ಸಾವುಗಳು ವರದಿಯಾಗುವುದರೊಂದಿಗೆ ಈ ದೇಶಗಳಲ್ಲಿ ಕ್ಯಾನ್ಸರ್ ಗಮನಾರ್ಹ ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ ಎನ್ನುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ಈ ಪೈಕಿ ಚೀನಾದಲ್ಲಿ 48 ಲಕ್ಷ ಹೊಸ ಪ್ರಕರಣಗಳು ಮತ್ತು 27 ಲಕ್ಷ ಸಾವುಗಳೊಂದಿಗೆ ಸಿಂಹಪಾಲನ್ನು ಹೊಂದಿದೆ. ಜಪಾನ್ ಒಂಭತ್ತು ಲಕ್ಷ ಹೊಸ ಪ್ರಕರಣಗಳು ಮತ್ತು 4.4 ಲಕ್ಷ ಸಾವುಗಳನ್ನು ದಾಖಲಿಸಿದೆ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುರುಕ್ಷೇತ್ರ ಹಾಗೂ ಏಮ್ಸ್ ಜೋಧಪುರ ಮತ್ತು ಬತಿಂಡಾಗಳ ಸಂಶೋಧಕರನ್ನು ಒಳಗೊಂಡ ಅಂತರರಾಷ್ಟ್ರೀಯ ಸಂಶೋಧನಾ ತಂಡವು ಹೇಳಿದೆ.
ಏಶ್ಯಾದಲ್ಲಿ ಶ್ವಾಸನಾಳ ಮತ್ತು ಶ್ವಾಸಕೋಶ ಕ್ಯಾನ್ಸರ್ ಗಳು ಪ್ರಮುಖವಾಗಿದ್ದು, ಅಂದಾಜು 13 ಲಕ್ಷ ಪ್ರಕರಣಗಳು ಮತ್ತು 12 ಲಕ್ಷ ಸಾವುಗಳಿಗೆ ಕಾರಣವಾಗಿವೆ. ಇವು ಪುರುಷರನ್ನು ಹೆಚ್ಚಾಗಿ ಕಾಡುತ್ತವೆ ಮತ್ತು ಮಹಿಳೆಯರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ರೋಗಗಳಲ್ಲಿ ಮೂರನೇ ಸ್ಥಾನ ಹೊಂದಿವೆ ಎಂದು ವರದಿಯು ತಿಳಿಸಿದೆ.
ವಿಶೇಷವಾಗಿ ಮಹಿಳೆಯರಲ್ಲಿ ಗರ್ಭಕೋಶ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದ್ದು, ಇದು ಹಲವಾರು ದೇಶಗಳಲ್ಲಿ ಐದು ಪ್ರಮುಖ ಕ್ಯಾನ್ಸರ್ ಗಳಲ್ಲಿ ಒಂದಾಗಿದೆ. 2006ರಲ್ಲಿ ಪರಿಚಯಿಸಲಾಗಿದ್ದ ಹ್ಯೂಮನ್ ಪಾಪಿಲೋಮಾವೈರಸ್ (ಎಚ್ಪಿವಿ) ಲಸಿಕೆಯು ರೋಗವನ್ನು ತಡೆಯುವಲ್ಲಿ ಮತ್ತು ಎಚ್ಪಿವಿ ಸಂಬಂಧಿತ ಸಾವುಗಳ ಸಂಖ್ಯೆಯನ್ನು ತಗ್ಗಿಸುವಲ್ಲಿ ಪರಿಣಾಮಕಾರಿಯಾಗಿದೆ ಎನ್ನುವುದು ಸಾಬೀತಾಗಿದೆ ಎಂದು ಹೇಳಿರುವ ಸಂಶೋಧಕರು, ಒಟ್ಟಾರೆಯಾಗಿ ಏಶ್ಯಾ ಖಂಡದಲ್ಲಿ ಮತ್ತು ಪ್ರತ್ಯೇಕ ದೇಶಗಳಲ್ಲಿ ಟಿಬಿಎಲ್ (ಶ್ವಾಸನಾಳ ಮತ್ತು ಶ್ವಾಸಕೋಶ), ಸ್ತನ,ಕೊಲೊನ್ (ದೊಡ್ಡ ಕರುಳಿನ ನಿರ್ದಿಷ್ಟ ಭಾಗ) ಮತ್ತು ಗುದನಾಳ ಕ್ಯಾನ್ಸರ್,ಹೊಟ್ಟೆ ಮತ್ತು ಮೆಲಾನೊಮಾ ಅಲ್ಲದ ಚರ್ಮದ ಕ್ಯಾನ್ಸರ್ ಇವು 2019ರಲ್ಲಿ ಐದು ಅಗ್ರ ಸಾಮಾನ್ಯ ಕ್ಯಾನ್ಸರ್ ಗಳಲ್ಲಿ ಸೇರಿವೆ. ಅಲ್ಲದೆ ಕೆಲವು ದೇಶಗಳಲ್ಲಿ ರಕ್ತ ಕ್ಯಾನ್ಸರ್, ಪ್ರಾಸ್ಟೇಟ್,ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್ ಗಳೂ ವರದಿಯಾಗಿವೆ ಎಂದು ತಿಳಿಸಿದ್ದಾರೆ.