2,000 ಮುಖಬೆಲೆಯ 98.08% ನೋಟುಗಳು ವಾಪಾಸ್ಸಾಗಿದೆ : ಆರ್ ಬಿ ಐ ಮಾಹಿತಿ
ಮುಂಬೈ: 2,000 ಮುಖಬೆಲೆಯ 98.08% ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಮತ್ತು 6,839 ಕೋಟಿ ರೂ. ಮೌಲ್ಯದ ನೋಟುಗಳು ಇನ್ನೂ ಸಾರ್ವಜನಿಕರ ಬಳಿ ಇವೆ ಎಂದು ರಿಸರ್ವ್ ಬ್ಯಾಂಕ್ ಸೋಮವಾರ ಮಾಹಿತಿ ನೀಡಿದೆ.
2023ರ ಮೇ 19ರಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) 2,000ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. 2023ರ ಮೇ 19ರಂದು ವ್ಯವಹಾರದ ಮುಕ್ತಾಯದ ವೇಳೆಗೆ ಚಲಾವಣೆಯಲ್ಲಿರುವ 2,000 ರೂ. ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯವು 3.56 ಲಕ್ಷ ಕೋಟಿ ಎಂದು ಹೇಳಿತ್ತು. 2024ರ ನವೆಂಬರ್ 29ರಂದು ವ್ಯವಹಾರದ ಮುಕ್ತಾಯದ ವೇಳೆಗೆ ಇದು 6,839 ಕೋಟಿ ರೂ.ಗೆ ಇಳಿಕೆಯಾಗಿದೆ ಎಂದು ಆರ್ ಬಿಐ ತಿಳಿಸಿದೆ.
ಬ್ಯಾಂಕ್ ಗಳಲ್ಲಿ ಠೇವಣಿ ಇಡುವ ಹಾಗೂ ಬೇರೆ ಮುಖಬೆಲೆಯ ನೋಟುಗಳೊಂದಿಗೆ ಬದಲಾಯಿಸಿಕೊಳ್ಳುವುದಕ್ಕೆ ಆರ್ ಬಿ ಐ ಅವಕಾಶ ಕಲ್ಪಿಸಿತ್ತು. ಮೇ 19, 2023ರಲ್ಲಿ ಚಲಾವಣೆಯಲ್ಲಿದ್ದ 2,000 ರೂ. ಮುಖಬೆಲೆಯ ನೋಟುಗಳಲ್ಲಿ 98.08 ಪ್ರತಿಶತವನ್ನು ಹಿಂತಿರುಗಿಸಲಾಗಿದೆ ಎಂದು ಆರ್ ಬಿ ಐ ಹೇಳಿಕೆಯಲ್ಲಿ ತಿಳಿಸಿದೆ.