ಏರ್ ಇಂಡಿಯಾ ವಿಮಾನದಲ್ಲಿ ನೀಡಿದ ಊಟದಲ್ಲಿ ಬ್ಲೇಡ್ ಪತ್ತೆ!
PC : NDTV
ಹೊಸದಿಲ್ಲಿ: ಬೆಂಗಳೂರಿನಿಂದ ಸ್ಯಾನ್ಫ್ರಾನ್ಸಿಸ್ಕೊಗೆ ತೆರಳುವ (AI 175) ವಿಮಾನದಲ್ಲಿ ಜೂನ್ 9ರಂದು ಪ್ರಯಾಣಿಕರೊಬ್ಬರಿಗೆ ನೀಡಿದ ಊಟದಲ್ಲಿ ಬ್ಲೇಡ್ ಪತ್ತೆಯಾದ ಬಗ್ಗೆ ದೂರು ನೀಡಲಾಗಿದೆ. ಆದರೆ ಯಾವುದೇ ಗಾಯ ಅಗುವ ಮುನ್ನ ಅದು ಪ್ರಯಾಣಿಕನಿಗೆ ಗೊತ್ತಾಗಿ ಉಗಿದಿದ್ದಾರೆ. ಕಳೆದ ಕೆಲ ವಾರಗಳಲ್ಲಿ ಸುಧೀರ್ಘ ವಿಳಂಬ ಹಾಗೂ ವಿಮಾನದಲ್ಲಿ ನೀಡುವ ಕಳಪೆ ಉತ್ಪನ್ನಗಳಿಂದಾಗಿ ಏರ್ ಇಂಡಿಯಾ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗುತ್ತಿದೆ.
"ಊಟದಲ್ಲಿ ನೀಡಿದ್ದ ಹುರಿದ ಗೆಣಸು ಮತ್ತು ಫಿಗ್ ಚಾಟ್ನಲ್ಲಿ ಬ್ಲೇಡ್ ಕಂಡುಬಂದಿದೆ. ಅದನ್ನು ಜಗಿಯುತ್ತಿದ್ದಾಗ ಕೆಲ ಸೆಕೆಂಡ್ ಕಾಲ ಲೋಹದ ತುಂಡು ಸಿಕ್ಕಿದಂತಾಯಿತು. ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ" ಎಂದು ಪ್ರಯಾಣಿಕ ವಿವರಿಸಿದ್ದಾರೆ. "ಇದರ ನೇರ ಹೊಣೆ ಏರ್ ಇಂಡಿಯಾದ ಕೇಟರಿಂಗ್ ಸರ್ವೀಸ್ಗೆ ಸೇರಿದ್ದು. ಆದರೆ ಇದರಿಂದ ಏರ್ ಇಂಡಿಯಾ ಬಗೆಗಿನ ನನ್ನ ಭಾವನೆ ಬದಲಾಗಿಲ್ಲ. ಒಂದು ಮಗುವಿಗೆ ಇಂಥ ಲೋಹದ ತುಂಡು ಇದ್ದ ಊಟ ನೀಡಿದ್ದರೆ ಏನಾಗುತ್ತಿತ್ತು? ಎಂದು ಮಾಥುರೆಸ್ ಪಾಲ್ ತಮ್ಮ ಎಕ್ಸ್ ಹ್ಯಾಂಡಲ್ನಿಂದ ಮಾಡಿದ ಪೋಸ್ಟ್ ನಲ್ಲಿ ಪ್ರಶ್ನಿಸಿದ್ದಾರೆ.
"ನಮ್ಮ ಒಂದು ವಿಮಾನದಲ್ಲಿ ಅತಿಥಿಗಳಿಗೆ ನೀಡಿದ ಊಟದಲ್ಲಿ ಲೋಹದ ತುಂಡು ಪತ್ತೆಯಾಗಿದೆ ಎಂದು ಏರ್ ಇಂಡಿಯಾ ದೃಢಪಡಿಸುತ್ತದೆ. ಇದು ನಮ್ಮ ಊಟೋಪಚಾರ ಪಾಲುದಾರರು ಬಳಸುತ್ತಿದ್ದ ತರಕಾರಿ ಸಂಸ್ಕರಣೆ ಯಂತ್ರದಿಂದ ಬಂದಿದೆ ಎನ್ನುವುದು ತನಿಖೆಯಿಂದ ಗೊತ್ತಾಗಿದೆ. ತರಕಾರಿಗಳನ್ನು ಕತ್ತರಿಸುವ ವೇಳೆ ಸಂಸ್ಕರಣಾ ಯಂತ್ರವನ್ನು ನಿಯತವಾಗಿ ಪರಿಶೀಲಿಸುವ ಮೂಲಕ ಇಂಥ ಘಟನೆಗಳು ಮರುಕಳಿಸದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ" ಎಂದು ಏರ್ ಇಂಡಿಯಾದ ಅಧಿಕಾರಿ ರಾಜೇಶ್ ಡೋಗ್ರಾ ಹೇಳಿದ್ದಾರೆ.