ಹಾಲಿನ ಟ್ಯಾಂಕರ್ ಗೆ ಕಾರು ಢಿಕ್ಕಿ; ಬಿಜೆಪಿ ನಾಯಕನ ಪುತ್ರ ಮೃತ್ಯು
ಸಾಂದರ್ಭಿಕ ಚಿತ್ರ.
ನೂಹ್ (ಹರ್ಯಾಣ): ರಾಜಸ್ಥಾನದ ಬಿಜೆಪಿ ನಾಯಕರೊಬ್ಬರ ಪುತ್ರನು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮಂಗಳವಾರ ಹರ್ಯಾಣದ ನೂಹ್ ಜಿಲ್ಲೆಯ ದೇವ್ಲಾ ನಗ್ಲಿ ಹ್ಯಾಮ್ಲೆಟ್ ಬಳಿಯ ದಿಲ್ಲಿ-ಮುಂಬೈ ಹೆದ್ದಾರಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಬಿಜೆಪಿ ನಾಯಕ ಸತ್ವೀರ್ ಚಾಂದಿಲಾರ ಪುತ್ರ ಆಕಾಶ್ ಚಾಂದಿಲಾ ಎಂದು ಗುರುತಿಸಲಾಗಿದೆ ಎಂದು news18.com ವರದಿ ಮಾಡಿದೆ.
ರಾಜಸ್ಥಾನದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ತಮ್ಮ ಐಷಾರಾಮಿ ಕಾರಿನಲ್ಲಿ ಫರಿದಾಬಾದ್ ನಲ್ಲಿರುವ ತಮ್ಮ ನಿವಾಸಕ್ಕೆ ಮರಳುವ ಮಾರ್ಗಮಧ್ಯದಲ್ಲಿ ಹಾಲಿನ ಟ್ಯಾಂಕರ್ ಒಂದಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಹಾಲಿನ ಟ್ಯಾಂಕರ್ ಚಾಲಕನು ದಿಢೀರ್ ಎಂದು ಬ್ರೇಕ್ ಹಾಕಿ,ತನ್ನ ವಾಹನವನ್ನು ನಿಯಂತ್ರಿಸಲು ವಿಫಲನಾಗಿದ್ದರಿಂದ ಅಪಘಾತ ಸಂಭವಿಸಿದೆ. ಅಪಘಾತ ಸಂಭವಿಸಿದ ಕೂಡಲೇ ಆಕಾಶ್ ರನ್ನು ನಲ್ಹರ್ ವೈದ್ಯಕೀಯ ಕಾಲೇಜಿಗೆ ಸಾಗಿಸಿ, ನಂತರ ಗುರ್ಗಾಂವ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಅಲ್ಲಿ ಅವರು ಮೃತಪಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, “ಅಪಘಾತವೆಸಗಿದ ಚಾಲಕನನ್ನು ಉತ್ತರ ಪ್ರದೇಶದ ನಿತಿನ್ ಯಾದವ್ ಎಂದು ಗುರುತಿಸಲಾಗಿದ್ದು, ಆತ ಕಳೆದ ನಾಲ್ಕು ವರ್ಷಗಳಿಂದ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ನಾವು ಆತನನ್ನು ಬಂಧಿಸುತ್ತೇವೆ” ಎಂದು ತಿಳಿಸಿದ್ದಾರೆ.