ನಕಲಿ ಎನ್ ಸಿ ಸಿ ಶಿಬಿರದಲ್ಲಿ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ | ಎಸ್ಐಟಿ ತನಿಖೆಗೆ ತಮಿಳುನಾಡು ಸರಕಾರ ಆದೇಶ
ಎ.ಕೆ. ಸ್ಟಾಲಿನ್ | PC : PTI
ಚೆನ್ನೈ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಇತ್ತೀಚೆಗೆ ನಕಲಿ ಎನ್ಸಿಸಿ ಶಿಬಿರದಲ್ಲಿ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್ಐಟಿ) ರೂಪಿಸಲು ತಮಿಳುನಾಡು ಮುಖ್ಯಮಂತ್ರಿ ಎ.ಕೆ. ಸ್ಟಾಲಿನ್ ಆದೇಶಿಸಿದ್ದಾರೆ.
ಈ ಪ್ರಕರಣದ ಕುರಿತಂತೆ 15 ದಿನಗಳ ಒಳಗೆ ತ್ವರಿತ ತನಿಖೆ ನಡೆಸುವಂತೆ ಹಾಗೂ 60 ದಿನಗಳ ಒಳಗೆ ಆರೋಪ ಪಟ್ಟಿ ಸಲ್ಲಿಸುವಂತೆ ಮುಖ್ಯಮಂತ್ರಿ ಈ ವಿಶೇಷ ತನಿಖಾ ತಂಡಕ್ಕೆ ಸೂಚಿಸಿದ್ದು, ಈ ತಂಡದ ನೇತೃತ್ವವನ್ನು ಹಿರಿಯ ಐಪಿಎಸ್ ಅಧಿಕಾರಿ ಕೆ. ಭವನೀಶ್ವರಿ ವಹಿಸಲಿದ್ದಾರೆ.
ಇಂತಹ ಘಟನೆಗಳು ಮರುಕಳಿಸುವುದನ್ನು ತಡೆಗಟ್ಟುವ ಮಾರ್ಗಗಳನ್ನು ಶಿಫಾರಸು ಮಾಡಲು ಬಹು ಶಿಸ್ತೀಯ ತಂಡ (ಎಂಡಿಟಿ)ವನ್ನು ರೂಪಿಸಲು ಕೂಡ ಸ್ಟಾಲಿನ್ ನಿರ್ದೇಶಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಎಂಡಿಟಿಯ ನೇತೃತ್ವವನ್ನು ಸಾಮಾಜಿಕ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಜಯಶ್ರೀ ಮುರಳೀಧರನ್ ವಹಿಸಲಿದ್ದಾರೆ. ಪೊಲೀಸ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಪ್ರತಿನಿಧಿಗಳು ಇದರಲ್ಲಿ ಒಳಗೊಂಡಿರಲಿದ್ದಾರೆ.
ಕೃಷ್ಣನಗರಿ ಜಿಲ್ಲೆಯ ಬರ್ಗೂರಿನಲ್ಲಿ ನಡೆದ ನಕಲಿ ಎನ್ಎಸ್ಎಸ್ ಶಿಬಿರದಲ್ಲಿ 13 ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಪ್ರಧಾನ ಆರೋಪಿ ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ.
ಇಂತಹ ನಕಲಿ ಎನ್ಸಿಸಿ ಶಿಬಿರಗಳು ಇತರ ಕಡೆ ನಡೆದಿವೆಯೇ ಎಂದು ದೃಢಪಡಿಸಲು ತನಿಖೆ ನಡೆಯುತ್ತಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ. ಈ ಪ್ರಕರಣದಲ್ಲಿ ಪಾಲ್ಗೊಂಡವರಿಗೆ ಕಠಿಣ ಶಿಕ್ಷೆಯ ಖಾತರಿ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶಿಸಿದ್ದಾರೆ.