ನ್ಯಾಯಾಲಯವು ಸಂಪೂರ್ಣ ವ್ಯವಸ್ಥೆಯನ್ನು ನಿಭಾಯಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ದೇಶಾದ್ಯಂತ ಡಿಎನ್ಎ ಪರೀಕ್ಷೆ ಲಭ್ಯವಾಗುವಂತೆ ಮಾಡಬೇಕು ಎಂದು ಕೋರಿದ್ದ ಅರ್ಜಿ ವಜಾ
ಸುಪ್ರೀಂಕೋರ್ಟ್ | Photo: PTI
ಹೊಸದಿಲ್ಲಿ: ಪೋಷಕತ್ವಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಪರಿಹರಿಸಲು ದೇಶಾದ್ಯಂತ ಡಿಎನ್ಎ ಪರೀಕ್ಷೆಯ ಲಭ್ಯತೆಯನ್ನು ಸ್ಥಾಪಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಸೋಮವಾರ ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ನ್ಯಾಯಾಲಯವು ಸಂಪೂರ್ಣ ವ್ಯವಸ್ಥೆಯನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಅರ್ಜಿ ವಿಚಾರಣೆಯು ನ್ಯಾ. ಸಂಜಯ್ ಕಿಶನ್ ಕೌಲ್ ಹಾಗೂ ಸುಧಾಂಶು ಧುಲಿಯಾ ಅವರನ್ನೊಳಗೊಂಡಿದ್ದ ನ್ಯಾಯಪೀಠದೆದುರು ವಿಚಾರಣೆಗೆ ಬಂದಿತ್ತು ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅರ್ಜಿಯಲ್ಲಿ ಕೋರಿರುವಂತೆ ದೇಶಾದ್ಯಂತ ಆಧಾರದಲ್ಲಿ ಡಿಎನ್ಎ ಪರೀಕ್ಷೆಯನ್ನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿತು. “ನ್ಯಾಯಾಲಯಗಳು ಸಂಪೂರ್ಣ ವ್ಯವಸ್ಥೆಯನ್ನು ನಿಭಾಯಿಸಲು ಸಾಧ್ಯವಿಲ್ಲ. ಅವು ಪ್ರಕರಣದೊಂದಿಗೆ ಉದ್ಭವಿಸುವ ಸಂಗತಿಗಳ ಕುರಿತು ಮಾತ್ರ ನಿರ್ಧರಿಸಲಿವೆ” ಎಂದು ಅರ್ಜಿದಾರರಿಗೆ ನ್ಯಾಯಪೀಠವು ತಿಳಿಸಿತು.
ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112ರ ಅನ್ವಯ ಊರ್ಜಿತ ವಿವಾಹವು ಮುಂದುವರಿದಿದ್ದಾಗ ಆಗುವ ಜನನವು ಮಗುವಿನ ನ್ಯಾಯಸಮ್ಮತ ಜನನಕ್ಕೆ ನಿರ್ಣಾಯಕ ಪುರಾವೆಯಾಗಿದೆ ಎಂದು ನ್ಯಾಯಪೀಠವು ಉಲ್ಲೇಖಿಸಿತು.