ನಿವೃತ್ತರಾಗುವ ಒಂದು ದಿನ ಮುಂಚೆ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಕಲ್ಪಿಸಿದ ನ್ಯಾಯಾಧೀಶ
ಜ್ಞಾನವಾಪಿ ಮಸೀದಿ | Photo: PTI
ಹೊಸದಿಲ್ಲಿ : ವಾರಣಾಸಿ ಜಿಲ್ಲಾ ನ್ಯಾಯಾಧೀಶರು ನಿವೃತ್ತರಾಗುವ ಒಂದು ದಿನ ಮುಂದೆ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಕಲ್ಪಿಸಿಕೊಡುವ ತೀರ್ಪು ನೀಡಿದ್ದಾರೆ.
ತೀರ್ಪು ನೀಡಿದ ನ್ಯಾಯಮೂರ್ತಿ ಅಜಯ್ ಕೃಷ್ಣ ಅವರು ಬುಧವಾರ ಜನವರಿ 31ರಂದು ನಿವೃತ್ತರಾಗಿದ್ದಾರೆ. ಅದಕ್ಕಿಂತ ಒಂದು ದಿನ ಮುಂಚೆ ಅವರು ಮೊಘಲರ ಕಾಲದ ಜ್ಞಾನವಾಪಿ ಮಸೀದಿಯ ಮೊಹರು ಮಾಡಿದ ನೆಲಮಾಳಿಗೆಯೊಳಗೆ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ಮಾಡಿ ತೀರ್ಪು ನೀಡಿದ್ದಾರೆ.
ಈ ತೀರ್ಪಿನ ಮೂಲಕ ಮಸೀದಿಯೊಳಗೆ ಧಾರ್ಮಿಕ ಹಕ್ಕುಗಳನ್ನು ಮತ್ತು ಮುಸ್ಲಿಮರಿಂದ ಅದರ ಅಂತಿಮ ಸ್ವಾಧೀನವನ್ನು ಬಯಸುತ್ತಿರುವ ಹಿಂದೂ ವಾದಿಗಳು, ನ್ಯಾಯಾಲಯದ ಆದೇಶವನ್ನು ವಿಜಯವೆಂದು ಬಣ್ಣಿಸಿದ್ದಾರೆ.
ಜ್ಞಾನವಾಪಿ ಮಸೀದಿಯ ಉಸ್ತುವಾರಿಗಳು ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ನಿರಾಸೆ ವ್ಯಕ್ತಪಡಿಸಿದ್ದಾರೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ವರದಿಯಲ್ಲಿ ಮಸೀದಿಯನ್ನು ನಿರ್ಮಿಸುವ ಮೊದಲು ಅಲ್ಲಿ "ದೊಡ್ಡ ಹಿಂದೂ ದೇವಾಲಯ" ಅಸ್ತಿತ್ವದಲ್ಲಿತ್ತು ಎಂದು ವಾರಣಾಸಿ ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿಕೊಂಡಿದೆ.
ಜಿಲ್ಲಾ ನ್ಯಾಯಾಧೀಶ ಅಜಯ ಕೃಷ್ಣ ವಿಶ್ವೇಶ ಅವರು ಏಳು ದಿನಗಳಲ್ಲಿ ಮಸೀದಿಯ ದಕ್ಷಿಣ ತೆಹಖಾನಾ ಅಥವಾ ನೆಲಮಾಳಿಗೆಯ ಒಳಗೆ ಪೂಜೆ ಮತ್ತು ಇತರ ಹಿಂದೂ ಚಟುವಟಿಕೆಗಳಿಗೆ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.
ಪಕ್ಕದ ಕಾಶಿ ವಿಶ್ವನಾಥ ಮಂದಿರವನ್ನು ನಿರ್ವಹಿಸುವ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ನಿಂದ ನೇಮಿಸಲ್ಪಟ್ಟ ಅರ್ಚಕರ ಮೂಲಕ ತೆಹಖಾನಾದ ಒಳಗೆ "ವಿಗ್ರಹಗಳ" ಪೂಜೆ ಮತ್ತು "ರಾಗ್-ಭೋಗ್" ನಡೆಸುವಂತೆ ನ್ಯಾಯಾಧೀಶ ವಿಶ್ವೇಶ ಆಡಳಿತಕ್ಕೆ ನಿರ್ದೇಶನ ನೀಡಿದರು.
ಆಚಾರ್ಯ ವೇದವ್ಯಾಸ ಪೀಠದ ದೇವಸ್ಥಾನದ ಸ್ಥಳೀಯ ಅರ್ಚಕ ಶೈಲೇಂದ್ರ ಕುಮಾರ್ ಪಾಠಕ್ ಅವರು ಮಸೀದಿಯ ನೆಲಮಾಳಿಗೆಯಲ್ಲಿ ಮಾ ಶೃಂಗಾರ್ ಗೌರಿ ಮತ್ತು ಇತರ ದೇವತೆಗಳನ್ನು ಪೂಜಿಸುವ ಹಕ್ಕುಗಳನ್ನು ಕೋರಿ ಸಲ್ಲಿಸಿದ ಅರ್ಜಿಯ ಮೇಲೆ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಈ ಹಿಂದೆ ಮುಚ್ಚಿದ ನೆಲಮಾಳಿಗೆಯೊಳಗೆ ವಿಗ್ರಹಗಳನ್ನು ಇರಿಸಲಾಗಿತ್ತು ಮತ್ತು ಅವರ ಪೂರ್ವಜರು ನೆಲಮಾಳಿಗೆಯೊಳಗೆ ಪೂಜೆಯನ್ನು ನಡೆಸುತ್ತಿದ್ದರು ಎಂದು ಪಾಠಕ್ ಮಾಡಿದ ಎಲ್ಲಾ ಹೇಳಿಕೆಗಳನ್ನು ಮಸೀದಿಯ ಉಸ್ತುವಾರಿಗಳು ತಿರಸ್ಕರಿಸಿದ್ದರು.
ನ್ಯಾಯಾಧೀಶ ವಿಶ್ವೇಶ ಅವರು ಹಿಂದೂ ವಾದಿ ಪರ ತೀರ್ಪು ನೀಡಿದ್ದು, ಪೂಜೆಯ ಉದ್ದೇಶಕ್ಕಾಗಿ ಅಗತ್ಯ ಬೇಲಿಯನ್ನು ಅಳವಡಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ನೆಲಮಾಳಿಗೆಯನ್ನು ಸುರಕ್ಷಿತವಾಗಿಡಲು ಜಿಲ್ಲಾಧಿಕಾರಿಗಳಿಗೆ ಜನವರಿ 17 ರಂದು ನ್ಯಾಯಾಲಯ ಸೂಚಿಸಿತ್ತು. ಬಳಿಕ ಜಿಲ್ಲಾಧಿಕಾರಿಗಳು ಜನವರಿ 24 ರಂದು ನೆಲಮಾಳಿಗೆ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರು. ಮಸೀದಿಯ ದಕ್ಷಿಣದ ನೆಲಮಾಳಿಗೆಯಲ್ಲಿ ವಿಗ್ರಹಗಳನ್ನು ಇರಿಸಲಾಗಿದೆ ಮತ್ತು ಪುರೋಹಿತರಾಗಿ ತನ್ನ ಪೂರ್ವಜರು ಅಲ್ಲಿ ಇರಿಸಲಾದ ವಿಗ್ರಹಗಳಿಗೆ ಪೂಜೆ ಸಲ್ಲಿಸುತ್ತಿದ್ದರು ಎಂದು ಪಾಠಕ್ ತಮ್ಮ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ. ಡಿಸೆಂಬರ್ 1993 ರ ನಂತರ "ಪೂಜಾರಿ ವ್ಯಾಸ್ ಜಿ" ಅಥವಾ ಅವರ ತಾಯಿಯ ಅಜ್ಜ ಸೋಮನಾಥ್ ವ್ಯಾಸ್ ಅವರನ್ನು ಮಸೀದಿಯ ಬ್ಯಾರಿಕೇಡ್ ಹಾಕಿರುವ ಪ್ರದೇಶಕ್ಕೆ ಪ್ರವೇಶಿಸದಂತೆ ತಡೆಯಲಾಗಿದೆ ಎಂದು ಪಾಠಕ್ ಉಲ್ಲೇಖಿಸಿದ್ದಾರೆ. ರಾಗ್-ಭೋಗ್ ಮತ್ತು ಸಂಸ್ಕಾರ ಆಚರಣೆಗಳನ್ನೂ ನಿಲ್ಲಿಸಲಾಗಿದೆ ಎಂದು ಪಾಠಕ್ ಹೇಳಿದ್ದಾರೆ.
ಪೂರಕ ಮಾಹಿತಿ : TheWire.in