ಶಂಭುಗಡಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಆಸ್ಪತ್ರೆಯಲ್ಲಿ ಮೃತ್ಯು
ಸಾಂದರ್ಭಿಕ ಚಿತ್ರ
ಪಾಟಿಯಾಲ : ದಿಲ್ಲಿಯ ಶಂಭುಗಡಿಯಲ್ಲಿ ಡಿಸೆಂಬರ್ 14ರಂದು ರೈತರ ಪ್ರತಿಭಟನೆಯ ನಡುವೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ 57 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಬುಧವಾರ ಇಲ್ಲಿನ ರಾಜೇಂದ್ರ ಸರಕಾರಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದಾರೆ.
ಲೂಧಿಯಾನ ಜಿಲ್ಲೆಯ ರತನ್ಹೆರಿ ಗ್ರಾಮದ ರಣಜೋಧ್ ಸಿಂಗ್ ಮೃತಪಟ್ಟ ರೈತ. ನವೆಂಬರ್ 26ರಿಂದೀಚೆಗೆ ಖನೌರಿ ಗಡಿಯಲ್ಲಿ ಅಮರಣಾಂತ ನಿರಶನ ನಡೆಸುತ್ತಿಇರುವ ರೈತ ನಾಯಕ ಜಗಜೀತ್ ಸಿಂಗ್ ದಲ್ಲೇವಾಲ್ ಅವರ ಆರೋಗ್ಯ ಹದಗೆಟ್ಟದ್ದರಿಂದ ತೀವ್ರವಾಗಿ ನೊಂದಿದ್ದ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ರೈತ ನಾಯಕರು ತಿಳಿಸಿದ್ದಾರೆ.
ರಣಜೋಧ್ ಸಿಂಗ್ ಅವರು ತನ್ನ ಪಾಲಕರು, ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಶಂಭುಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಆತ ಪಾಲ್ಗೊಂಡಿದ್ದರು.
ತಮ್ಮ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರಕಾರವನ್ನು ಆಗ್ರಹಿಸಿ ದಿಲ್ಲಿಯ ಗಡಿಭಾಗದಲ್ಲಿರುವ ಶಂಭು ಹಾಗೂ ಖನೌರಿಯಲ್ಲಿ ಫೆಬ್ರವರಿ 13ರಿಂದ ಧರಣಿಯನ್ನು ನಡೆಸುತ್ತಿದ್ದಾರೆ.