ಪುತ್ರಿಯನ್ನು ಅಪಹರಿಸಲಾಗಿದೆ ಎಂದು ದೂರು ನೀಡಿದ ತಂದೆ; ತನಿಖೆಯಲ್ಲಿ ಬಯಲಾಗಿದ್ದು ಏನು?
ಸಾಂದರ್ಭಿಕ ಚಿತ್ರ
ಮುಂಬೈ: ತನ್ನ ಪುತ್ರಿ ನಾಪತ್ತೆಯಾಗಿದ್ದರಿಂದ 46 ವರ್ಷದ ವ್ಯಕ್ತಿಯೊಬ್ಬರು ದಾಖಲಿಸಿದ್ದ ಅಪಹರಣ ದೂರು ಪ್ರಕರಣಕ್ಕೆ ನಾಟಕೀಯ ತಿರುವು ದೊರೆತಿದ್ದು, ಆತ ಕಳೆದ ಐದು ವರ್ಷಗಳಿಂದ ತನ್ನ ಪುತ್ರಿಯ ಮೇಲೆಯೇ ನಿರಂತರವಾಗಿ ಅತ್ಯಾಚಾರ ನಡೆಸಿರುವ ಸಂಗತಿ ಬಯಲಿಗೆ ಬಂದಿದೆ. ಈ ಲೈಂಗಿಕ ದೌರ್ಜನ್ಯದಿಂದ ಪಾರಾಗಲು ಬಾಲಕಿಯು ಮನೆ ಬಿಟ್ಟು ಪರಾರಿಯಾಗಿದ್ದಳು ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
ಗುರುವಾರ ಆರೋಪಿ ತಂದೆಯನ್ನು ಬಂಧಿಸಿರುವ ಪೊಲೀಸರು, ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳು ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತನ್ನ ತಂದೆಯ ಕೃತ್ಯದಿಂದ ಬೇಸತ್ತಿದ್ದ 17 ವರ್ಷದ ಬಾಲಕಿಯು ಕೇಂದ್ರ ಮುಂಬೈನ ಮಹಾಲಕ್ಷ್ಮಿ ಪ್ರದೇಶದಲ್ಲಿರುವ ತನ್ನ ನಿವಾಸದಿಂದ ಬುಧವಾರ ಪರಾರಿಯಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಆಕೆಯನ್ನು ಪತ್ತೆ ಹಚ್ಚಲು ವಿಫಲವಾಗಿದ್ದ ಆರೋಪಿ ತಂದೆಯು, ಟಾರ್ಡಿಯೊ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ, ತನ್ನ ಪುತ್ರಿಯನ್ನು ಅಪಹರಿಸಲಾಗಿದೆ ಎಂದು ದೂರು ದಾಖಲಿಸಿದ್ದ. ಈ ದೂರನ್ನು ಆಧರಿಸಿ ಅಪರಿಚಿತ ವ್ಯಕ್ತಿಯ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಶೋಧ ಕಾರ್ಯಕ್ಕೆ ಚಾಲನೆ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಪಶ್ಚಿಮ ರೈಲ್ವೆಯ ಮಹಾಲಕ್ಷ್ಮಿ ನಿಲ್ದಾಣದ ಬಳಿ ಅಪರಾಧ ದಳದ ಪೊಲೀಸರಿಗೆ ಬಾಲಕಿಯೊಬ್ಬಳು ಪತ್ತೆಯಾಗಿದ್ದಾಳೆ. ಆ ಬಾಲಕಿಯನ್ನು ಅಪರಾಧ ದಳ ಕಚೇರಿಗೆ ಕರೆದೊಯ್ದಾಗ, ತನ್ನ ತಂದೆಯಿಂದಾಗುತ್ತಿದ್ದ ಅಮಾನುಷ ಲೈಂಗಿಕ ದೌರ್ಜನ್ಯವನ್ನು ಆ ಬಾಲಕಿ ಬಹಿರಂಗಪಡಿಸಿದ್ದಾಳೆ ಎಂದು ಅವರು ತಿಳಿಸಿದ್ದಾರೆ.
ಆಕೆಯ ದೂರನ್ನು ಆಧರಿಸಿ ಪೊಲೀಸರು, ಅತ್ಯಾಚಾರ ಮತ್ತಿತರರ ಅಪರಾಧಗಳಡಿ ಆಕೆಯ ತಂದೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.