ಸುಪ್ರೀಂ ಕೋರ್ಟ್ ನಲ್ಲಿ ವಿಧಿ 370ರ ರದ್ದತಿ ವಿರುದ್ಧ ವಾದಿಸಿದ್ದ ಕಾಶ್ಮೀರದ ಉಪನ್ಯಾಸಕ ಅಮಾನತು
ಸುಪ್ರೀಂ ಕೋರ್ಟ್ | Photo: PTI
ಶ್ರೀನಗರ: ನಾಲ್ಕು ದಿನಗಳ ಹಿಂದಷ್ಟೇ ಸರ್ವೋಚ್ಚ ನ್ಯಾಯಾಲಯದಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರದ ಕ್ರಮದ ವಿರುದ್ಧ ಆರು ನಿಮಿಷಗಳ ಕಾಲ ವಾದಿಸಿದ್ದ ಕಾಶ್ಮೀರಿ ಉಪನ್ಯಾಸಕ ಓರ್ವರನ್ನು ಜಮ್ಮು-ಕಾಶ್ಮೀರದ ಉಪರಾಜ್ಯಪಾಲರು ಶಿಕ್ಷಣ ಇಲಾಖೆಯಿಂದ ಅಮಾನತುಗೊಳಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯು ಜಮ್ಮು-ಕಾಶ್ಮೀರ ನಾಗರಿಕ ಸೇವಾ ನಿಯಮಗಳು, ಜಮ್ಮು-ಕಾಶ್ಮೀರ ಸರಕಾರಿ ನೌಕರರ ನಡವಳಿಕೆ ನಿಯಮಗಳು ಮತ್ತು ಜಮ್ಮು-ಕಾಶ್ಮೀರ ರಜಾ ನಿಯಮಗಳ ಉಲ್ಲಂಘನೆಗಾಗಿ ರಾಜಕೀಯ ವಿಜ್ಞಾನದ ಹಿರಿಯ ಉಪನ್ಯಾಸಕ ಝಹೂರ್ ಅಹ್ಮದ್ ಭಟ್ ಅವರನ್ನು ಅಮಾನತುಗೊಳಿಸಿದೆ. ಆದೇಶವು ತಕ್ಷಣದಿಂದಲೇ ಜಾರಿಗೊಂಡಿದೆ. ಅಮಾನತಿನ ಅವಧಿಯಲ್ಲಿ ಭಟ್ ಜಮ್ಮು ಶಾಲಾ ಶಿಕ್ಷಣ ನಿರ್ದೇಶಕರ ಕಚೇರಿಯಲ್ಲಿ ನಿಯೋಜಿತರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬುಧವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸ್ವತಃ ಹಾಜರಾಗಿದ್ದ, ಕಾನೂನು ಪದವಿಯನ್ನೂ ಹೊಂದಿರುವ ಭಟ್ ‘ನಾನು ಜಮ್ಮು-ಕಾಶ್ಮೀರದಲ್ಲಿ ಭಾರತೀಯ ರಾಜಕೀಯವನ್ನು ಕಲಿಸುತ್ತೇನೆ. 2019ರಿಂದಲೂ ಈ ಸುಂದರ ಸಂವಿಧಾನವನ್ನು ಬೋಧಿಸುವುದು ನನಗೆ ಅತ್ಯಂತ ಕಷ್ಟವಾಗುತ್ತಿದೆ. 2019ರ ನಂತರ ನಾವು ಪ್ರಜಾಪ್ರಭುತ್ವವಾಗಿ ಉಳಿದಿದ್ದೇವೆಯೇ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದಾಗ ಉತ್ತರಿಸುವುದು ಕಷ್ಟವಾಗುತ್ತಿದೆ. ವಿಧಿ 370ನ್ನು ರದ್ದುಗೊಳಿಸುವುದಿಲ್ಲ ಎಂದು ಆಗಿನ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರು 2019, ಆ.4ರಂದು ನೀಡಿದ್ದ ಭರವಸೆಯ ಹೊರತಾಗಿಯೂ ಮಧ್ಯರಾತ್ರಿಯಲ್ಲಿ ಕರ್ಫ್ಯೂ ಹೇರಲಾಯಿತು ಮತ್ತು ಮಾಜಿ ಮುಖ್ಯಮಂತ್ರಿಗಳನ್ನು ಬಂಧಿಸಲಾಯಿತು’ ಎಂದು ತಿಳಿಸಿದರು.
ಭಾರತೀಯ ಸಂವಿಧಾನದ ನೈತಿಕತೆಯನ್ನು ಉಲ್ಲಂಘಿಸಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೆಳದರ್ಜೆಗೆ ಇಳಿಸಲಾಯಿತು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು. ಜಮ್ಮು-ಕಾಶ್ಮೀರ ಮತ್ತು ಲಡಾಖ್ ನ ಜನರ ಒಪ್ಪಿಗೆಯನ್ನು ಪರಿಗಣನೆಗೆ ತೆಗೆದುಕೊಂಡಿರದ ಕಾರಣ ಇದು ಜನರ ಪ್ರಜಾಪ್ರಭುತ್ವದ ಹಕ್ಕಿಗೆ ವಿರುದ್ಧವಾಗಿತ್ತು. ಈ ಕ್ರಮವು ಸಹಕಾರಿ ಒಕ್ಕೂಟವಾದ ಮತ್ತು ಸಂವಿಧಾನದ ಸರ್ವೋಚ್ಚತೆಗೆ ವಿರುದ್ಧವಾಗಿತ್ತು ಎಂದು ಹೇಳಿದರು. 370ನೇ ವಿಧಿಗೆ ಸಂಬಂಧಿಸಿದಂತೆ ಅಂದಿನ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದಾಗ ವಿಧಾನ ಪರಿಷತ್ತು ಅಸ್ತಿತ್ವದಲ್ಲಿತ್ತು ಎಂದು ವಾದಿಸಿದ ಭಟ್, ಜಮ್ಮು-ಕಾಶ್ಮೀರ ವಿಧಾನಸಭೆಯನ್ನು ವಿಸರ್ಜಿಸಲಾಗಿತ್ತು, ಆದರೆ ಆ.4-5ರಂದು ವಿಧಾನ ಪರಿಷತ್ತು ಅಬಾಧಿತವಾಗಿತ್ತು. ರಾಜ್ಯಪಾಲರು ವಿಧಾನ ಪರಿಷತ್ತಿನ ಒಪ್ಪಿಗೆಯನ್ನು ಪಡೆದುಕೊಳ್ಳುವ ಆಯ್ಕೆಯನ್ನು ಹೊಂದಿದ್ದರು. ಆದರೆ 36 ಸದಸ್ಯರ ವಿಧಾನ ಪರಿಷತ್ ಅನ್ನು ಕಡೆಗಣಿಸಲಾಯಿತು ಮತ್ತು ಅವರಲ್ಲಿ ಹಲವರನ್ನು ಬಂಧಿಸಲಾಯಿತು ಎಂದು ತಿಳಿಸಿದರು.
ಈ ನಡುವೆ ಉಪ ರಾಜ್ಯಪಾಲರ ಸರಕಾರವು ಭಟ್ ಅವರ ನಡವಳಿಕೆಯ ಬಗ್ಗೆ ಆಳವಾದ ವಿಚಾರಣೆಯನ್ನು ನಡೆಸುವಂತೆ ಜಮ್ಮುವಿನ ಶಾಲಾ ಶಿಕ್ಷಣ ನಿರ್ದೇಶಕ ಸುಬಾಹ್ ಮೆಹ್ತಾ ಅವರಿಗೆ ನಿರ್ದೇಶನ ನೀಡಿದೆ.