ನ್ಯಾಯಾಂಗದ ಸಮಗ್ರತೆಗೆ ಧಕ್ಕೆ ತರಲಾಗುತ್ತಿದೆ ಎಂದು 600ಕ್ಕೂ ಅಧಿಕ ವಕೀಲರಿಂದ ಸಿಜೆಐಗೆ ಪತ್ರ
ಡಿ ವೈ ಚಂದ್ರಚೂಡ್ | Photo: PTI
ಹೊಸದಿಲ್ಲಿ: ಹಿರಿಯ ವಕೀಲ ಹರೀಶ್ ಸಾಳ್ವೆ, ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಸಹಿತ ದೇಶಾದ್ಯಂತದ 600 ಕ್ಕೂ ಅಧಿಕ ವಕೀಲರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದು ನ್ಯಾಯಾಂಗದ ಸಮಗ್ರತೆಗೆ ಧಕ್ಕೆ ತರಲಾಗುತ್ತಿದೆ ಎಂಬ ಕುರಿತು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.
“ಸ್ಥಾಪಿತ ಹಿತಾಸಕ್ತಿ ಗುಂಪೊಂದು ನ್ಯಾಯಾಂಗ ಪ್ರಕ್ರಿಯೆಗಳನ್ನು ತಿರುಚಲು ಯತ್ನಿಸಿ, ಕೋರ್ಟ್ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಮತ್ತು ನ್ಯಾಯಾಂಗದ ಗೌರವಕ್ಕೆ ನಿರಾಧಾರ ಆರೋಪಗಳು ಮತ್ತು ರಾಜಕೀಯ ಅಜೆಂಡಾಗಳ ಮೂಲಕ ಧಕ್ಕೆ ತರಲು ಯತ್ನಿಸುತ್ತಿದೆ,” ಎಂದು ಪತ್ರದಲ್ಲಿ ವಕೀಲರು ಆರೋಪಿಸಿದ್ದಾರೆ.
ಭ್ರಷ್ಟಾಚಾರ ಆರೋಪ ಹೊತ್ತ ರಾಜಕೀಯ ವ್ಯಕ್ತಿಗಳ ಪ್ರಕರಣಗಳಲ್ಲಿ ಈ ತಂತ್ರಗಾರಿಕೆ ಪ್ರಮುಖವಾಗಿ ಗೋಚರವಾಗುತ್ತದೆ ಎಂದೂ ಪತ್ರದಲ್ಲಿ ತಿಳಿಸಲಾಗಿದೆ.
“ನ್ಯಾಯಾಂಗದ ಕಾರ್ಯನಿರ್ವಹಣೆ ಬಗ್ಗೆ ತಪ್ಪಾದ ಅಭಿಪ್ರಾಯ ಮತ್ತು ನ್ಯಾಯಾಲಯಗಳ “ಸುವರ್ಣ ಯುಗ” ಎಂದು ಹೇಳಲಾದ ಕಾಲದೊಂದಿಗೆ ಈಗಿನ ನ್ಯಾಯಾಂಗವನ್ನು ಹೋಲಿಸಲಾಗುತ್ತಿದೆ. ಈ ರೀತಿ ಮಾಡಿ ನ್ಯಾಯಾಂಗ ತೀರ್ಪುಗಳ ಮೇಲೆ ಪ್ರಭಾವ ಬೀರಲು ಮತ್ತು ನ್ಯಾಯಾಂಗದ ಮೇಳೆ ಜನರ ವಿಶ್ವಾಸ ನಶಿಸುವಂತೆ ಮಾಡುವ ಪ್ರಯತ್ನವಾಗಿದೆ,” ಎಂದು ಪತ್ರದಲ್ಲಿ ಹೇಳಲಾಗಿದೆ.
“ಬೆಂಚ್ ಫಿಕ್ಸಿಂಗ್” ಎಂಬ ಕಪೋಲಕಲ್ಪಿತ ವಾದದ ಕುರಿತೂ ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಈ ರೀತಿ ಮಾಡುವುದು ಅಗೌರವ ಮಾತ್ರವಾಗಿರದೆ ಕಾನೂನು ಮತ್ತು ನ್ಯಾಯದ ತತ್ವಗಳಿಗೆ ಹಾನಿಯೆಸಗುತ್ತದೆ” ಎಂದು ಪತ್ರ ಹೇಳಿದೆ.
“ಈಗಿನ ಬೆಳವಣಿಗೆಗಳು ಕೇವಲ ಟೀಕೆಗಳಲ್ಲ, ಅವುಗಳು ನಮ್ಮ ನ್ಯಾಯಾಂಗದ ಮೇಲೆ ಜನರ ನಂಬಿಕೆಗೆ ಘಾಸಿಗೊಳಿಸುವ ನೇರ ದಾಳಿಗಳಾಗಿವೆ,” ಎಂದು ಪತ್ರದಲ್ಲಿ ಹೇಳಲಾಗಿದೆ.
ನ್ಯಾಯಾಂಗವನ್ನು ಬಾಹ್ಯ ಒತ್ತಡಗಳಿಂದ ರಕ್ಷಿಸಲು ಕ್ರಮಕೈಗೊಳ್ಳುವಂತೆಯೂ ವಕೀಲರು ಸುಪ್ರೀಂ ಕೋರ್ಟ್ ಸಿಜೆಐಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.