ಬಿಹಾರದಲ್ಲಿ ಗೋಮಾಂಸ ಸಾಗಾಟ ಶಂಕೆಯಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಗುಂಪು
ಸಾಂದರ್ಭಿಕ ಚಿತ್ರ: PTI
ಪಾಟ್ನಾ: ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ವಾಹನದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಶಂಕಿಸಿ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಸರಣ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು Hindustan Times ಪತ್ರಿಕೆ ವರದಿ ಮಾಡಿದೆ.
ಮುಹಮ್ಮದ್ ಝಹೀರುದ್ದೀನ್ (55) ಎಂಬುವವರು ತಾವು ಕೆಲಸ ನಿರ್ವಹಿಸುವ ಮೂಳೆ ಕಾರ್ಖಾನೆಯೊಂದಕ್ಕೆ ಬುಧವಾರ ರಾತ್ರಿ ತಮ್ಮ ವಾಹನದಲ್ಲಿ ತೆರಳುವಾಗ ಅದು ದಾರಿ ಮಧ್ಯದಲ್ಲಿ ಕೆಟ್ಟು ನಿಂತಿದೆ. ಆಗ ಝಹೀರುದ್ದೀನ್ ನೆರವಿಗೆ ಧಾವಿಸಿರುವ ಗುಂಪೊಂದು ವಾಹನದಿಂದ ನಿರ್ದಿಷ್ಟ ಬಗೆಯ ವಾಸನೆಯೊಂದು ಬರುತ್ತಿರುವುದನ್ನು ಗಮನಿಸಿ ತಮಗೆ ವಾಹನದೊಳಗೆ ಪ್ರವೇಶಿಸಲು ಅನುಮತಿ ನೀಡುವಂತೆ ಅವರನ್ನು ಒತ್ತಾಯಿಸಿದೆ ಎಂದು ಹೆಸರೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾಹನದಲ್ಲಿ ಕೆಲವು ಮೂಳೆಗಳನ್ನು ಕಂಡಿರುವ ಗುಂಪು, ಗೋಮಾಂಸ ಸಾಗಾಟ ಮಾಡಲಾಗುತ್ತಿದೆ ಎಂದು ಶಂಕಿಸಿ ಝಹಿರುದ್ದೀನ್ ಮೇಲೆ ಹಲ್ಲೆ ನಡೆಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಝಹೀರುದ್ದೀನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಗುರುವಾರ ಬಿಹಾರ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಈ ಹತ್ಯೆಯ ಸಂಬಂಧ ಈವರೆಗೆ ಏಳು ಮಂದಿಯನ್ನು ಬಂಧಿಸಲಾಗಿದೆ. ಝಹೀರುದ್ದೀನ್ ಸಂಬಂಧಿಕರು ನೀಡಿರುವ ದೂರನ್ನು ಆಧರಿಸಿ ಅಪರಿಚಿತ 25 ಮಂದಿಯ ಪೈಕಿ ಗುರುತು ಸಿಕ್ಕಿರುವ ಇನ್ನೂ ಆರು ಮಂದಿಯ ಹೆಸರನ್ನು ಪ್ರಾಥಮಿಕ ಮಾಹಿತಿ ವರದಿಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಹತ್ಯೆ, ನ್ಯಾಯಬಾಹಿರ ಸೆರೆ, ಗಲಭೆ ಹಾಗೂ ಕಾನೂನುಬಾಹಿರವಾಗಿ ಗುಂಪುಗೂಡುವಿಕೆ ಪ್ರಕರಣಗಳಲ್ಲಿ ದಾಖಲಿಸಿಕೊಳ್ಳಲಾಗಿದೆ ಎಂದೂ ಪೊಲೀಸರು ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಸರಣ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಮಂಗಳ ತಿಳಿಸಿದ್ದಾರೆ.