ಮಳೆ ಅನಾಹುತದಿಂದ ಮನೆಗಳನ್ನು ಕಳೆದುಕೊಂಡ 30 ಕುಟುಂಬಗಳಿಗೆ ಆಶ್ರಯ ನೀಡಿ ಸೌಹಾರ್ದತೆ ಮೆರೆದ ತಮಿಳುನಾಡಿನ ಈ ಮಸೀದಿ
Photo: thenewsminute.com
ಚೆನ್ನೈ: ತಮಿಳುನಾಡಿನ ದಕ್ಷಿಣ ಭಾಗದ ಹಲವು ಪ್ರದೇಶಗಳು ಭಾರೀ ಮಳೆ ಮತ್ತು ಪ್ರವಾಹದಿಂದ ಬಾಧಿತವಾಗಿ ನೂರಾರು ಮನೆಗಳು ಜಲಾವೃತವಾಗಿರುವ ನಡುವೆ ತಿರುನೆಲ್ವೇಲಿಯಿಂದ ತೂತುಕುಡಿಗೆ ಸಾಗುವ ಹಾದಿಯಲ್ಲಿರುವ ಸೇಯ್ದುಂಗನಲ್ಲೂರು ಬೈತುಲ್ಮಲ್ ಜಮಾತ್ ಮಸೀದಿಯು ತಮ್ಮ ಮನೆಗಳನ್ನು ಕಳೆದುಕೊಂಡ ಸುಮಾರು 30 ಹಿಂದು ಕುಟುಂಬಗಳಿಗೆ ಆಶ್ರಯ ಒದಗಿಸಿ ಧಾರ್ಮಿಕ ಸಾಮರಸ್ಯವನ್ನು ಮೆರೆದಿದೆ. ಕಳೆದ ನಾಲ್ಕು ದಿನಗಳಿಂದ ಈ ಕುಟುಂಬಗಳು ಅಲ್ಲಿ ಆಶ್ರಯ ಪಡೆದಿವೆ ಎಂದು thenewsminute.com ವರದಿ ಮಾಡಿದೆ.
ತಮ್ಮ ಮನೆಗಳನ್ನು ಕಳೆದುಕೊಂಡ ಕುಟುಂಬಗಳನ್ನು ಸ್ವಾಗತಿಸುವುದರ ಹೊರತಾಗಿ ಅವರಿಗೆ ಸಾಕಷ್ಟು ಆಹಾರ, ಬಟ್ಟೆಬರೆ, ಔಷಧಿ, ಸ್ಯಾನಿಟರಿ ನ್ಯಾಪ್ಕಿನ್ ಮುಂತಾದ ಅಗತ್ಯ ವಸ್ತುಗಳನ್ನೂ ಮಸೀದಿ ಸಮಿತಿ ಒದಗಿಸಿದೆ.
“ನಾವು ಇಲ್ಲಿ ಎಷ್ಟು ದಿನ ಬೇಕಾದರೂ ಉಳಿದುಕೊಳ್ಳಬಹುದು ಎಂದು ಅವರು ನಮಗೆ ಹೇಳಿದ್ದಾರೆ. ಔಷಧಿಯಿಂದ ಹಿಡಿದು ಆಹಾರದವರೆಗೆ ಅವರು ನಮಗೆ ಎಲ್ಲವನ್ನೂ ಒದಗಿಸುತ್ತಿದ್ದಾರೆ, ನಾಲ್ಕು ದಿನಗಳ ಹಿಂದೆ ಉಟ್ಟ ಬಟ್ಟೆಯಲ್ಲಿಯೇ ಇಲ್ಲಿಗೆ ಆಗಮಿಸಿದೆವು,” ಎಂದು ಇಲ್ಲಿರುವ ಹಲವರು ಮಸೀದಿ ಸಮಿತಿಯ ಹೃದಯವೈಶಾಲ್ಯತೆಯನ್ನು ಕೊಂಡಾಡಿದ್ದಾರೆ.
“ಇಲ್ಲಿ ಆಶ್ರಯ ಪಡೆದಿರುವವರೆಲ್ಲರೂ ತಮ್ಮ ಮನೆಗಳಿಗೆ ವಾಪಸಾಗುವ ತನಕ ಅವರು ಇಲ್ಲಿಯೇ ಇರಲು ಅನುಕೂಲಕರವಾಗುವಂತಾಗಲು ನಾವು ಇಲ್ಲಿ ಪ್ರಾರ್ಥನೆಗಳನ್ನು ನಡೆಸದೇ ಇರಲು ನಿರ್ಧರಿಸಿದ್ದೇವೆ,” ಎಂದು ಜಮಾತ್ ಸಮಿತಿ ಸದಸ್ಯ ಇಮ್ರಾನ್ ಖಾನ್ ಹೇಳಿದ್ದಾರೆ.