ರೋಗಿಯೊಬ್ಬರ ರೂ. 52 ಲಕ್ಷ ಮೊತ್ತದ ಬಿಲ್ ಪಾವತಿಗಾಗಿ ಕೋರ್ಟ್ ಮೆಟ್ಟಿಲೇರಿದ ದಿಲ್ಲಿ ಆಸ್ಪತ್ರೆ
Moolchand Hospital. | Photo: NDTV
ಹೊಸದಿಲ್ಲಿ: ಉಲ್ಬಣಾವಸ್ಥೆಯಲ್ಲಿರುವ ಅಲ್ಝೈಮರ್ ರೋಗದ ಚಿಕಿತ್ಸೆಗಾಗಿ 2017ರಿಂದ ದಿಲ್ಲಿಯ ಮೂಲ್ ಚಂದ್ ಆಸ್ಪತ್ರೆಗೆ ದಾಖಲಾಗಿದ್ದ ನ್ಯೂಯಾರ್ಕ್ ನ 84 ವರ್ಷದ ಸ್ರೀರೋಗ ತಜ್ಞರೊಬ್ಬರ ಆರೋಗ್ಯ ಸ್ಥಿತಿಯು ವಿಷಮಿಸಿದೆ ಎಂದು ದಿಲ್ಲಿ ಹೈಕೋರ್ಟ್ ಗೆ ಮಾಹಿತಿ ನೀಡಿರುವ ಆಸ್ಪತ್ರೆಯು, ಅವರ ಚಿಕಿತ್ಸಾ ವೆಚ್ಚವಾದ ರೂ. 52 ಲಕ್ಷವನ್ನು ಪಾವತಿಸುವಂತೆ ಸೂಚಿಸಬೇಕು ಎಂದು ಮನವಿ ಮಾಡಿದೆ ಎಂದು ndtv.com ವರದಿ ಮಾಡಿದೆ.
2017ರಲ್ಲಿ ಡಾ. ಸುಂದ್ರಿ ಜಿ. ಭಗ್ವನಾನಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದ ಆಕೆಯ ಸಹೋದರ, ತನ್ನನ್ನು ತನ್ನ ರೋಗಪೀಡಿತ ಸಹೋದರಿಯ ಚಿಕಿತ್ಸಾ ವೆಚ್ಚ ಮತ್ತು ಆಕೆಯ ಒಟ್ಟಾರೆ ಆರೋಗ್ಯದ ಉಸ್ತುವಾರಿಯನ್ನಾಗಿ ನೇಮಿಸಬೇಕು ಎಂದು ಸಲ್ಲಿಸಿದ್ದ ತಮ್ಮ ಅರ್ಜಿ ವಿಚಾರಣೆಯು ಬಾಕಿ ಇರುವಾಗಲೇ ಮೃತಪಟ್ಟಿದ್ದರು.
ಮಹಿಳಾ ರೋಗಿಯ ವೈದ್ಯಕೀಯ ವೆಚ್ಚವಾದ ರೂ. 51,97,329 ಪಾವತಿಗಾಗಿ ಆಸ್ಪತ್ರೆಯು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ದಿಲ್ಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ನ್ಯಾ. ಪುರುಷೈಂದ್ರ ಕುಮಾರ್ ಕೌರವ್, ಮುಂದಿನ ವಿಚಾರಣೆಯನ್ನು ನವೆಂಬರ್ ತಿಂಗಳಿಗೆ ಮುಂದೂಡಿದ್ದಾರೆ.
ರೋಗಿಯು ನೆನಪಿನ ಶಕ್ತಿ ಕಳೆದುಕೊಂಡಿರುವುದರಿಂದ ಹಾಗೂ ಆಕೆಯನ್ನು ಆರೈಕೆ ಮಾಡಲು ಯಾವುದೇ ಸಂಬಂಧಿಗಳು ಮುಂದೆ ಬಾರದೆ ಇರುವುದರಿಂದ, ಕಳೆದ ವರ್ಷ ಅಮಿಸ್ ಕ್ಯೂರಿಯನ್ನು ನೇಮಿಸಿದ್ದ ದಿಲ್ಲಿ ಹೈಕೋರ್ಟ್, ಮಹಿಳೆಯನ್ನು ಪರೀಕ್ಷಿಸಿ, ಪರಿಹಾರ ಸೂಚಿಸುವಂತೆ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ ಆ್ಯಂಡ್ ಅಲೈಡ್ ಸೈನ್ಸಸ್ (ಐಎಚ್ಬಿಎಸ್) ಅನ್ನೂ ನೇಮಕ ಮಾಡಿತ್ತು.
ಭಗ್ವನಾನಿ ಅವರು ಉಲ್ಬಣಾವಸ್ಥೆಯ ಅಲ್ಝೈಮರ್ ರೋಗದಿಂದ ಬಳಲುತ್ತಿದ್ದು, ಆಕೆ ತನ್ನ ಸ್ವಯಂ ಆರೈಕೆ ಮಾಡಿಕೊಳ್ಳಲಾಗದ ಹಾಗೂ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯವಿರುವ ಹಂತ ತಲುಪಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ಆಗ್ನೇಯ ದಿಲ್ಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ರೋಗಿಯ ಸೀಮಿತ ರಕ್ಷಕರನ್ನಾಗಿ ನೇಮಿಸಿದ್ದ ಹೈ ಕೋರ್ಟ್, ಆಕೆಯ ಆರೈಕೆ ಮಾಡಲು ಹಾಗೂ ಆಕೆಯ ರಕ್ಷಕರ ಕುರಿತು ನಿರ್ಣಯ ಕೈಗೊಳ್ಳಲು ಐಎಚ್ಬಿಎಎಸ್ ವತಿಯಿಂದ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎಂದು ಆದೇಶಿಸಿತ್ತು.
ಬಾಕಿ ಬಿಲ್ ಗಳಿಗೆ ಸಂಬಂಧಿಸಿದಂತೆ, ಆಸ್ಪತ್ರೆಗೆ ಎಷ್ಟು ಮೊತ್ತ ಬಾಕಿ ನೀಡಬೇಕಿದೆ ಎಂಬ ಕುರಿತು ನಿರ್ಧರಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಸೂಚನೆ ನೀಡಿದ್ದ ಹೈಕೋರ್ಟ್, ಎರಡನೇ ಪ್ರತಿವಾದಿಯಾದ ಮೂಲ್ ಚಂದ್ ಆಸ್ಪತ್ರೆಗೆ ಎಷ್ಟು ಮೊತ್ತವನ್ನು ಪಾವತಿಸಲು ಅವಕಾಶವಿದೆ ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ನೀಡಿದೆ. ಜೊತೆಗೆ ಮಹಿಳಾ ರೋಗಿಯ ಬ್ಯಾಂಕ್ ಖಾತೆಯನ್ನು ನಿರ್ವಹಿಸುವಂತೆ ಸೂಚಿಸಿದೆ. ಆಕೆಯ ಚಿಕಿತ್ಸೆಗೆ ಅಗತ್ಯವಿರುವ ಮೊತ್ತವನ್ನು ಆಸ್ಪತ್ರೆಗೆ ಬಿಡುಗಡೆ ಮಾಡುವಂತೆ ನೀಡಿರುವ ಆದೇಶದಲ್ಲಿ ಹೈಕೋರ್ಟ್ ಹೇಳಿದೆ.