ಹಿಮಾಚಲ ಪ್ರದೇಶದಲ್ಲಿ ಮೃತಪಟ್ಟಿದ್ದ ಇಬ್ಬರು ಚಾರಣಿಗರ ಕಾವಲು ಕಾದ ಸಾಕು ನಾಯಿ!
Photo: indiatoday.in
ಬೀರ್ ಬಿಲ್ಲಿಂಗ್ (ಹಿಮಾಚಲ ಪ್ರದೇಶ): ಚಾರಣ ನಡೆಸುವಾಗ ಇಬ್ಬರು ಚಾರಣಿಗರು ಮೃತಪಟ್ಟಿದ್ದು, ಅವರ ಸಾಕು ನಾಯಿಯ ಕಾರಣಕ್ಕೆ ಅವರ ಮೃತ ದೇಹಗಳು 48 ಗಂಟೆಗಳ ನಂತರ ಪತ್ತೆಯಾಗಿರುವ ಘಟನೆ ಹಿಮಾಚಲ ಪ್ರದೇಶದ ಬೀರ್ ಬಿಲ್ಲಿಂಗ್ನಲ್ಲಿ ನಡೆದಿದೆ ಎಂದು indiatoday.in ವರದಿ ಮಾಡಿದೆ.
ಚಾರಣಿಗರ ಜೊತೆ ತೆರಳಿದ್ದ ಜರ್ಮನ್ ಶೆಫರ್ಡ್ ನಾಯಿ ಕೇವಲ ಅವರ ದೇಹಗಳ ಕಾವಲು ಮಾತ್ರ ಕಾಯದೆ, ರಕ್ಷಣಾ ತಂಡಗಳು ಅವರನ್ನು ಫೆಬ್ರವರಿ 6ರಂದು ಪತ್ತೆ ಹಚ್ಚುವವರೆಗೂ ಒಂದೇ ಸಮನೆ ಬೊಗಳಿದೆ.
ಮೃತ ಚಾರಣಿಗರನ್ನು ಮಹಾರಾಷ್ಟ್ರದ ಅಭಿನಂದನ್ ಗುಪ್ತ (30) ಹಾಗೂ ಪಠಾಣ್ಕೋಟ್ನ ಪ್ರಣೀತಾ ವಾಲಾ (26) ಎಂದು ಗುರುತಿಸಲಾಗಿದೆ. ಪ್ಯಾರಾ ಗ್ಲೈಡಿಂಗ್ಗೆ ಹೆಸರುವಾಸಿಯಾದ ಕಣಿವೆ ಪ್ರದೇಶದಲ್ಲಿ ಅವರಿಬ್ಬರೂ ಸೋಮವಾರದಿಂದ ನಾಪತ್ತೆಯಾಗಿದ್ದರು. ಅವರ ಮೃತ ದೇಹಗಳನ್ನು ಅವರು ಮೇಲಕ್ಕೆ ಹಾರಿದ ಸ್ಥಳದಿಂದ ಅಂದಾಜು ಮೂರು ಕಿಮೀ ಕೆಳಗೆ ಪತ್ತೆ ಹಚ್ಚಲಾಗಿದೆ.
ಉಪ ವಿಭಾಗ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತರ ದೇಹಗಳನ್ನು ಅವರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಹಿಮದ ಮೇಲೆ ಮಾರಣಾಂತಿಕವಾಗಿ ಬಿದ್ದಿರುವುದರಿಂದ ಯುವಕ ಹಾಗೂ ಯುವತಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತರ ಪೈಕಿ ಯುವಕನ ತಲೆಯನ್ನು ಕ್ರೂರ ಮೃಗಗಳು ಗಂಭೀರವಾಗಿ ಹಾನಿಗೊಳಿಸಿವೆ ಎಂದು ಹೇಳಲಾಗಿದೆ.