ಮದರಸ, ಮಸೀದಿ ಧ್ವಂಸಗೊಂಡ ಸ್ಥಳದಲ್ಲಿ ಪೊಲೀಸ್ ಠಾಣೆ ಸ್ಥಾಪನೆ
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಘೋಷಣೆ
ಡೆಹ್ರಾಡೂನ್ : ಉತ್ತರಾಖಂಡದ ಹಲ್ದ್ವಾನಿ ಪಟ್ಟಣದಲ್ಲಿ ಮಸೀದಿ ಮತ್ತು ಮದರಸಗಳನ್ನು ಧ್ವಂಸಗೊಳಿಸಲಾದ ಸ್ಥಳದಲ್ಲಿ ಪೊಲೀಸ್ ಠಾಣೆಯೊಂದನ್ನು ನಿರ್ಮಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೋಮವಾರ ತಿಳಿಸಿದ್ದಾರೆ.
ಹಲ್ದ್ವಾನಿ ನಗರದ ಬಂಭೂಲ್ಪುರ ಎಂಬಲ್ಲಿದ್ದ ಮರಿಯಮ್ ಮಸೀದಿ ಮತ್ತು ಅಬ್ದುಲ್ ರಝಾಕ್ ಝಕಾರಿಯ ಮದ್ರಸವನ್ನು ಫೆಬ್ರವರಿ 8ರಂದು ಸ್ಥಳೀಯ ಮುನಿಸಿಪಾಲಿಟಿ ಅಧಿಕಾರಿಗಳು ಬುಲ್ಡೋಝರ್ ಮೂಲಕ ಧ್ವಂಸಗೊಳಿಸಿದ್ದರು. ಅವುಗಳನ್ನು ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿತ್ತು ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯು ಉತ್ತರಾಖಂಡ ಹೈಕೋರ್ಟ್ನಲ್ಲಿ ಇರುವಾಗಲೇ ಅವುಗಳನ್ನು ಧ್ವಂಸಗೊಳಿಸಲಾಗಿತ್ತು.
ಧಾರ್ಮಿಕ ಸ್ಥಳಗಳು ಧ್ವಂಸಗೊಂಡ ಬಳಿಕ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯು ಹಿಂಸೆಗೆ ತಿರುಗಿ ಪೊಲೀಸ್ ಗೋಲಿಬಾರಿನಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಬಂಭೂಲ್ಪುರದ ಉದ್ಯಾನವನದಲ್ಲಿದ್ದ ‘‘ಅತಿಕ್ರಮಣ’’ವನ್ನು ಇತ್ತೀಚೆಗೆ ತೆರವುಗೊಳಿಸಲಾಗಿದೆ ಮತ್ತು ಹಲವು ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಧಾಮಿ ಸೋಮವಾರ ಹೇಳಿದರು.
‘‘ಆ ಸ್ಥಳದಲ್ಲಿ ಕಲ್ಲೆಸೆತ ಮತ್ತು ಬೆಂಕಿ ಹಚ್ಚುವಿಕೆ ಸಂಭವಿಸಿದೆ, ಶಾಂತಿ ಕದಡಿದೆ. ಎಲ್ಲಾ ಕಾನೂನುಗಳನ್ನು ಉಲ್ಲಂಘಿಸಲಾಗಿದೆ. ನಮ್ಮ ಪತ್ರಕರ್ತ ಗೆಳೆಯರನ್ನು ಬೆಂಕಿಗೆ ನೂಕಲಾಗಿತ್ತು’’ ಎಂದು ಹರಿದ್ವಾರದಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೇಳಿದರು.
‘‘ಆ ಸ್ಥಳದಲ್ಲಿ ಪೊಲೀಸ್ ಠಾಣೆಯೊಂದನ್ನು ನಿರ್ಮಿಸಲಾಗುವುದು ಎಂದು ಗಂಗಾ ನದಿಯ ಈ ಪವಿತ್ರ ದಡದಲ್ಲಿ ನಿಂತು ನಾನು ಘೋಷಿಸುತ್ತೇನೆ’’ ಎಂದರು.
ನಿಷ್ಪಕ್ಷ ತನಿಖೆಗೆ ಕಾಂಗ್ರೆಸ್ ಒತ್ತಾಯ
ಕಾಂಗ್ರೆಸ್ ಪಕ್ಷದ ನಿಯೋಗವೊಂದು ರವಿವಾರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯನ್ನು ಭೇಟಿಯಾಗಿ, ಘಟನೆಯ ಬಗ್ಗೆ ನಿಷ್ಪಕ್ಷ ತನಿಖೆ ನಡೆಸುವಂತೆ ಆಗ್ರಹಿಸಿದೆ.
ಹಲ್ದ್ವಾನಿಯಲ್ಲಿ ಕಾನೂನು ಮತ್ತು ವ್ಯವಸ್ಥೆಯನ್ನು ಕಾಪಾಡಲು ಸರಕಾರವು ತಕ್ಷಣ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಯಶ್ಪಾಲ್ ಆರ್ಯ ನೇತೃತ್ವದ ನಿಯೋಗಕ್ಕೆ ಧಾಮಿ ಹೇಳಿದರು ಎನ್ನಲಾಗಿದೆ.