ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಪ್ರಥಮ ಬಾರಿಗೆ ಟಿಎಂಸಿ-ಬಿಜೆಪಿಯಿಂದ ಅಪರೂಪದ ಒಗ್ಗಟ್ಟು ಪ್ರದರ್ಶನ!
PC : timesofindia
ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜ್ಯವನ್ನು ಪುನರ್ವಿಂಗಡಣೆ ಮಾಡಬೇಕು ಎಂಬ ಪ್ರಸ್ತಾವದ ವಿರುದ್ಧ ಇದೇ ಪ್ರಥಮ ಬಾರಿಗೆ ಆಡಳಿತಾರೂಢ ಟಿಎಂಸಿ ಹಾಗೂ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ವಿಧಾನಸಭೆಯಲ್ಲಿ ಅಪರೂಪದ ಒಗ್ಗಟ್ಟು ಪ್ರದರ್ಶಿಸಿದವು.
ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಸಲಹೆಯನ್ನು ಮನ್ನಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಅವಿಭಜಿತ ಪಶ್ಚಿಮ ಬಂಗಾಳದ ಅಭಿವೃದ್ಧಿ’ ಎಂದು ವಿಧಾನಸಭೆಯಲ್ಲಿ ಮಂಡಿಸಲಾದ ನಿರ್ಣಯವನ್ನು ಪರಿಷ್ಕರಿಸಿದರು.
ಕೇಂದ್ರ ರಾಜ್ಯ ಸಚಿವ ಸುಕಾಂತ ಮಜುಂದಾರ್, ಸಂಸದ ನಿಶಿಕಾಂತ್ ದುಬೆ ಹಾಗೂ ಶಾಸಕ ಗೌರಿ ಶಂಕರ್ ಘೋಷ್ ರಂತಹ ಹಲವು ಬಿಜೆಪಿ ನಾಯಕರು ಉತ್ತರ ಬಂಗಾಳ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ಅಥವಾ ಕೇಂದ್ರಾಡಳಿತ ಅಥವಾ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಈ ನಿರ್ಣಯವನ್ನು ಮಂಡಿಸಲಾಗಿದೆ. ಈ ಪ್ರದೇಶಗಳು ನಿಧಿಯ ಕೊರತೆ ಸೇರಿದಂತೆ ಧಾರ್ಮಿಕ ಭೌಗೋಳಿಕತೆ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಇವಕ್ಕೆ ವಿಶೇಷ ಪ್ಯಾಕೇಜ್ ಅಥವಾ ಕೇಂದ್ರಾಡಳಿತ ಅಥವಾ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಬಿಜೆಪಿ ನಾಯಕರು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದರು.
ಇದಕ್ಕೂ ಮುನ್ನ, ರಾಜ್ಯ ಸರಕಾರ ಮಂಡಿಸಿದ ನಿರ್ಣಯವನ್ನು ಟೀಕಿಸಿದ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಸುಕಾಂತ ಮಜುಂದಾರ್ ಪಶ್ಚಿಮ ಬಂಗಾಳ ವಿಭಜನೆಯನ್ನು ಪ್ರಸ್ತಾಪಿಸಿಯೇ ಇರಲಿಲ್ಲ ಎಂದು ಪ್ರತಿಪಾದಿಸಿದರು.