ಪ್ರತ್ಯೇಕ ಪ್ರಕರಣ: ಹೋಳಿ ದಿನದಂದು ದಿಲ್ಲಿಯಲ್ಲಿ ಆರು ಮಂದಿಯ ಹತ್ಯೆ

ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: ಹೋಳಿ ದಿನಾಚರಣೆಯಾದ ಸೋಮವಾರದಂದು ಆರು ಪ್ರತ್ಯೇಕ ಹತ್ಯೆ ಘಟನೆಗಳು ನಡೆದಿದ್ದು, ಈ ಘಟನೆಗಳಲ್ಲಿ ಭಾಗಿಯಾಗಿರುವ ಬಹುತೇಕ ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲ ಘಟನೆಯಲ್ಲಿ, ತನ್ನ ಪತಿ ಹಾಗೂ ಅತ್ತೆ-ಮಾವ ಹಾಗೂ ಮೈದುನ ಸೇರಿ 27 ವರ್ಷದ ಮಹಿಳೆಯೊಬ್ಬರು ಹತ್ಯೆಗೈದಿದ್ದಾರೆ. ಆರೋಪಿಗಳನ್ನು ಮಂಜೀತ್ (30), ಆತನ ತಂದೆ ಭೀಮ್ (52) ಹಾಗೂ ತಾಯಿ ಮೀನಾ (48) ಹಾಗೂ ಮೈದುನ ಮನೀಶ್ (27) ಎಂದು ಗುರುತಿಸಲಾಗಿದ್ದು, ಅವರನ್ನೆಲ್ಲ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಗಂಡ ಹೆಂಡತಿ ನಡುವಿನ ಜಗಳದ ಕುರಿತು ಪೊಲೀಸರು ಕರೆಯೊಂದನ್ನು ಸ್ವೀಕರಿಸಿದರು. ಘಟನಾ ಸ್ಥಳಕ್ಕೆ ತೆರಳಿದಾಗ, ಮಹಿಳೆಯೊಬ್ಬರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿತು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಆಕೆ ಮೃತಪಟ್ಟಿದ್ದಾಳೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿದರು. ಮೇಲ್ನೋಟಕ್ಕೆ ಈ ಘಟನೆಯು ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿರುವಂತಿದೆ” ಎಂದು ಹೇಳಿದ್ದಾರೆ.
ಸೋಮವಾರ ನಡೆದಿರುವ ಎರಡನೆಯ ಘಟನೆಯಲ್ಲಿ ಗುಂಪು ಘರ್ಷಣೆಯ ಸಂದರ್ಭದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು, ಹಲವು ಮಂದಿ ಗಾಯಗೊಂಡಿರುವ ಘಟನೆ ಉತ್ತರ ದಿಲ್ಲಿಯ ಗುಲಾಬಿ ಬಾಗ್ ನಲ್ಲಿ ನಡೆದಿದೆ.
ಎರಡನೆ ಹತ್ಯೆ ಪ್ರಕರಣದಲ್ಲಿ ಚಾಲಕ ಅಮೀರ್ ಎಂಬುವವರು ಔಷಧ ಖರೀದಿಗಾಗಿ ತಮ್ಮ ವಾಹನವನ್ನು ನಿಲ್ಲಿಸಿದಾಗ, ಗುಂಪೊಂದರೊಂದಿಗೆ ಸಂಘರ್ಷ ಏರ್ಪಟ್ಟಿದೆ. ಆಗ ಚಾಲಕ ಅಮೀರ್ ನನ್ನು ಹಿಂಬಾಲಿಸಿರುವ ಗುಂಪು, ಅವರ ಕಾರನ್ನು ಧ್ವಂಸಗೊಳಿಸಿದೆ. ಆಗ ಅಮೀರ್ ತನ್ನ ಸಹೋದರ ಕಾಮಿಲ್ ಗೆ ಕರೆ ಮಾಡಿದ್ದಾರೆ. ಕಾಮಿಲ್ ಕೂಡಲೇ ಮತ್ತಷ್ಟು ಜನರೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಈ ಸಂದರ್ಭದಲ್ಲಿ ಮತ್ತೊಂದು ಗುಂಪು ಅವರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದರಿಂದ ಕಾಮಿಲ್ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರನೆಯ ಹತ್ಯೆ ಘಟನೆಯು ಈಶಾನ್ಯ ದಿಲ್ಲಿಯ ಶಾಸ್ತ್ರಿ ಉದ್ಯಾನವನದ ಬಳಿ ನಡೆದಿದ್ದು, ತನ್ನ ಮಾಜಿ ಪತ್ನಿಯ ಪ್ರಿಯಕರನಿಂದ 22 ವರ್ಷದ ಯುವಕನೊಬ್ಬ ಗುಂಡೇಟಿಗೆ ಬಲಿಯಾಗಿದ್ದಾನೆ. ಸಂತ್ರಸ್ತ ಯುವಕನನ್ನು ಮುಸ್ತಾಕಿಮ್ ಎಂದು ಗುರುತಿಸಲಾಗಿದೆ.
ನಾಲ್ಕನೆಯ ಘಟನೆಯು ದಿಲ್ಲಿಯ ಮಂಗೋಲ್ಪುರಿ ಹೊರ ವಲಯದಲ್ಲಿ ನಡೆದಿದ್ದು, ನೆರೆಹೊರೆಯವರ ನಡುವೆ ನಡೆದ ಜಗಳದ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು, ಆತನ ತಾಯಿ ಮತ್ತು ಸಹೋದರಿಗೆ ಗಾಯಗಳಾಗಿವೆ. ಆಸ್ತಿ ವ್ಯಾಜ್ಯದ ಸಂಬಂಧ ಈ ಘಟನೆ ನಡೆದಿದ್ದು, ಈ ಸಂಬಂಧ ಇಬ್ಬರು ಶಂಕಿತ ಆರೋಪಿಗಳಾದ ವಿವೇಕ್ ಹಾಗೂ ಉಮೇಶ್ ದೇವಿ ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಘಟನೆಯು ಶಹ್ದಾರದ ಬಳಿ ನಡೆದಿದ್ದು, ದರೋಡೆ ಪ್ರಯತ್ನದ ಸಂದರ್ಭದಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆಗೈಯ್ಯಲಾಗಿದೆ. ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಗೋವಿಂದ ಹಾಗೂ ವಿಕಾಸ್ ಎಂದು ಗುರುತಿಸಲಾಗಿದ್ದು, ಮೃತ ವ್ಯಕ್ತಿ ರಾಜ್ ಕರಣ್ ಎಂಬ ವ್ಯಕ್ತಿಯಿಂದ ಫೋನ್ ಕಸಿಯಲು ಈ ಇಬ್ಬರು ಪ್ರಯತ್ನಿಸಿದ್ದಾರೆ. ಆದರೆ, ರಾಜ್ ಕರಣ್ ಅದಕ್ಕೆ ನಿರಾಕರಿಸಿದಾಗ, ಆತನ ಮೇಲೆ ಹಲ್ಲೆ ನಡೆಸಿ, ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊನೆಯ ಪ್ರಕರಣವು ಹೊರ ದಿಲ್ಲಿಯ ರಾಜ್ ಪಾರ್ಕ್ ನಲ್ಲಿ ನಡೆದಿದ್ದು, ಓರ್ವ ಮಹಿಳೆ ಹತ್ಯೆಗೀಡಾಗಿದ್ದಾಳೆ. ಮೃತ ಮಹಿಳೆಯನ್ನು 24 ವರ್ಷದ ಸುಲ್ತಾನ್ ಪುರಿ ನಿವಾಸಿ ಎಂದು ಗುರುತಿಸಲಾಗಿದೆ.