ಕೇಂದ್ರಕ್ಕೆ ಮುಖಭಂಗ; ಅಶೋಕ್ ಸ್ವೈನ್ ಓಸಿಐ ಪೌರತ್ವ ರದ್ದತಿ ಅಸಿಂಧುಗೊಳಿಸಿದ ಹೈಕೋರ್ಟ್
Photo: Times of India
ಹೊಸದಿಲ್ಲಿ: ಸ್ವೀಡನ್ ನಲ್ಲಿರುವ ಅಶೋಕ್ ಸ್ವೈನ್ ಅವರ ಸಾಗರೋತ್ತರ ಭಾರತೀಯ ಪೌರತ್ವ (ಓಸಿಐ) ಸ್ಥಾನಮಾನವನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ದೆಹಲಿ ಹೈಕೋರ್ಟ್ ಸೋಮವಾರ ಅಸಿಂಧುಗೊಳಿಸಿರುವ ಬಗ್ಗೆ ವರದಿಯಾಗಿದೆ.
ಕೇಂದ್ರ ಸರ್ಕಾರ ಈ ಸಂಬಂಧ 2022ರ ಫೆಬ್ರುವರಿಯಲ್ಲಿ ಹೊರಡಿಸಿದ ಆದೇಶಕ್ಕೆ ಸರ್ಕಾರ "ಯಾವುದೇ ಸಕಾರಣಗಳನ್ನು ನೀಡಿಲ್ಲ ಮತ್ತು ವಿವೇಚನೆಯನ್ನು ಬಳಸಿದ ಯಾವುದೇ ಸೂಚನೆ ಕಾಣಿಸುತ್ತಿಲ್ಲ" ಎಂದು ಛೀಮಾರಿ ಹಾಕಿದೆ ಎಂದು ತಿಳಿದು ಬಂದಿದೆ.
ಓಸಿಐ ಕಾರ್ಡನ್ನು ರದ್ದುಗೊಳಿಸುವ ಸಂಬಂಧದ ಸೆಕ್ಷನ್ ಪದೇ ಪದೇ ಉಲ್ಲೇಖಿಸಿದ್ದನ್ನು ಬಿಟ್ಟರೆ ಅರ್ಜಿದಾರರ ನೋಂದಣಿಯನ್ನು ಏಕೆ ರದ್ದುಪಡಿಸಲಾಗಿದೆ ಎಂಬ ಬಗ್ಗೆ ಯಾವುದೇ ಕಾರಣ ಈ ಆದೇಶದಲ್ಲಿಲ್ಲ ಎಂದು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಓಸಿಐ ಕಾರ್ಡ್ ರದ್ದುಪಡಿಸಿದ ಕೇಂದ್ರದ ಆದೇಶವನ್ನು ಪ್ರಶ್ನಿಸಿ ಸ್ವೀಡನ್ ನಿವಾಸಿಯಾಗಿರುವ ಸ್ವೈನ್ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ.
ಕೇಂದ್ರ ಹೊರಡಿಸಿರುವ ಆದೇಶ ನಿಜ ಅರ್ಥದಲ್ಲಿ ಆದೇಶವಾಗಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಮೂರು ವಾರದ ಒಳಗಾಗಿ ಪೌರತ್ವ ಕಾಯ್ದೆ-1955ರ ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸಿದ್ದಕ್ಕೆ ಕಾರಣಗಳನ್ನು ನೀಡಿ ಆದೇಶ ಹೊರಡಿಸುವಂತೆ ನ್ಯಾಯಾಲಯ ಸೂಚಿಸಿದೆ. ಏಜೆನ್ಸಿಗಳಿಗೆ ಮಾಹಿತಿ ಲಭ್ಯವಾಗಿದೆ ಹಾಗೂ ಈ ದಾಖಲೆಗಳನ್ನು ಅಧ್ಯಯನ ಮಾಡಿದ ಬಳಿಕ ಆದೇಶ ಹೊರಡಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಪರ ಅಭಿಯೋಜಕರು ವಾದ ಮಂಡಿಸಿದರು.