ಟರ್ಕಿಯಿಂದ ಭಾರತಕ್ಕೆ ಸಾಗುತ್ತಿದ್ದ ಹಡಗು ಹೈಜಾಕ್
ಶಂಕಿತ ಯಮನ್ ನ ಹೌದಿ ಬಂಡುಕೋರರ ಕೃತ್ಯ ಶಂಕೆ
ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: ಟರ್ಕಿಯಿಂದ ಭಾರತಕ್ಕೆ ಸಾಗುತ್ತಿದ್ದ ಸರಕು ಸಾಗಣಿಕೆ ಹಡಗನ್ನು ಕೆಂಪು ಸಮುದ್ರದಲ್ಲಿ ಯಮನ್ ನ ಹೌದಿ ಬಂಡುಕೋರರು ಹೈಜಾಕ್ ಮಾಡಿದ್ದಾರೆ. ಹಡಗಿನಲ್ಲಿ ವಿವಿಧ ದೇಶಗಳಿಗೆ ಸೇರಿದ ಸುಮಾರು 25 ಸಿಬ್ಬಂದಿಗಳಿದ್ದಾರೆ. ತಾವು ಇಸ್ರೇಲ್ ಹಡಗನ್ನು ವಶಪಡಿಸಿಕೊಂಡಿರುವುದಾಗಿ ಹೌದಿಗಳು ಹೇಳಿಕೊಂಡಿದ್ದಾರೆ,ಆದರೆ ಇದನ್ನು ಇಸ್ರೇಲ್ ನಿರಾಕರಿಸಿದೆ. ‘ಗೆಲಾಕ್ಸಿ ಲೀಡರ್ ’ ಹೆಸರಿನ ಈ ಹಡಗಿನಲ್ಲಿ ಯಾವುದೇ ಭಾರತೀಯರಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತನ್ಯಾಹು ಅವರ ಕಚೇರಿಯು ಸುಳಿವು ನೀಡಿದೆ.
ಹಡಗು ಹೈಜಾಕ್ ಆಗಿರುವುದನ್ನು ದೃಢಪಡಿಸಿರುವ ಇಸ್ರೇಲಿ ರಕ್ಷಣಾ ಪಡೆಗಳು,‘ಇದು ಜಾಗತಿಕ ಪರಿಣಾಮವನ್ನು ಬೀರಬಲ್ಲ ಅತ್ಯಂತ ಗಂಭೀರ ಘಟನೆಯಾಗಿದೆ. ಹಡಗು ಟರ್ಕಿಯಿಂದ ಭಾರತಕ್ಕಾಗಿ ಪ್ರಯಾಣ ಆರಂಭಿಸಿದ್ದು,ವಿವಿಧ ದೇಶಗಳ ಪ್ರಜೆಗಳು ಸಿಬ್ಬಂದಿಗಳಾಗಿದ್ದಾರೆ. ಅದರಲ್ಲಿ ಇಸ್ರೇಲಿಗಳಿಲ್ಲ ಮತ್ತು ಹಡಗು ಇಸ್ರೇಲಿಗೆ ಸೇರಿದ್ದಲ್ಲ ’ ಎಂದು X ಪೋಸ್ಟ್ ನಲ್ಲಿ ತಿಳಿಸಿವೆ.
‘ಅಂತರರಾಷ್ಟ್ರೀಯ ಹಡಗಿನ ಮೇಲೆ ಇರಾನ್ ದಾಳಿಯನ್ನು ಇಸ್ರೇಲ್ ಬಲವಾಗಿ ಖಂಡಿಸುತ್ತದೆ. ಬ್ರಿಟಿಷ್ ಸಂಸ್ಥೆಯ ಒಡೆತನದ ಈ ಹಡಗನ್ನು ಜಪಾನಿನ ಸಂಸ್ಥೆಯೊಂದು ನಿರ್ವಹಿಸುತ್ತಿದೆ. ಇರಾನ್ ಮಾರ್ಗದರ್ಶನದಲ್ಲಿ ಯಮನ್ ನ ಹೌದಿ ಬಂಡುಕೋರರು ಅದನ್ನು ಹೈಜಾಕ್ ಮಾಡಿದ್ದಾರೆ ’ಎಂದು ನೆತನ್ಯಾಹು ಅವರ ಕಚೇರಿಯು X ಪೋಸ್ಟ್ ನಲ್ಲಿ ತಿಳಿಸಿದೆ.
ಹಡಗನ್ನು ಯಮನ್ ನ ಸಲಿಫ್ ಬಂದರು ನಗರಿಗೆ ಒಯ್ಯಲಾಗಿದೆ ಎಂದು ಹೌದಿ ನಾಯಕನೋರ್ವನನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಬಹಾಮಾ ಧ್ವಜವನ್ನು ಹೊಂದಿರುವ ಹಡಗು ಬ್ರಿಟಷ್ ಕಂಪನಿಯಡಿ ನೋಂದಣಿಯನ್ನು ಹೊಂದಿದೆ ಮತ್ತು ಇಸ್ರೇಲಿ ಉದ್ಯಮಿ ಅಬ್ರಹಾಂ ಉಂಗರ್ ಅದರ ಭಾಗಶಃ ಒಡೆತನವನ್ನು ಹೊಂದಿದ್ದಾರೆ. ಹೈಜಾಕ್ ಸಂದರ್ಭದಲ್ಲಿ ಅದನ್ನು ಜಪಾನಿ ಕಂಪನಿಗೆ ಲೀಸ್ ನಲ್ಲಿ ನೀಡಲಾಗಿತ್ತು ಎಂದು ಟೈಮ್ಸ ಆಫ್ ಇಸ್ರೇಲ್ ವರದಿ ಮಾಡಿದೆ.
ಹೌದಿಗಳು ಕೆಂಪು ಸಮುದ್ರದಲ್ಲಿ ಸಾಗುವ ಇಸ್ರೇಲ್ನೊಂದಿಗೆ ನಂಟು ಹೊಂದಿರುವ ಹಡಗುಗಳನ್ನು ಗುರಿಯಾಗಿಸಿಕೊಳ್ಳುವುದಾಗಿ ಪಣ ತೊಟ್ಟಿದ್ದಾರೆ. ಗಾಝಾದಲ್ಲಿ ಇಸ್ರೇಲ್ ಆಕ್ರಮಣ ನಿಲ್ಲುವವರೆಗೂ ಕ್ಷಿಪಣಿಗಳು ಮತ್ತು ಡ್ರೋನ್ ದಾಳಿಗಳನ್ನು ಮುಂದುವರಿಸುವುದಾಗಿ ಯಮನಿ ಸಶಸ್ತ್ರ ಪಡೆಗಳು ದೃಢಪಡಿಸಿವೆ ಎಂದು ಹೌದಿ ಮಿಲಿಟರಿ ಈ ತಿಂಗಳ ಆರಂಭದಲ್ಲಿ ಹೇಳಿಕೆಯಲ್ಲಿ ತಿಳಿಸಿತ್ತು.