ರಾಮೇಶ್ವರಮ್ ಕೆಫೆ ಸ್ಫೋಟಕ್ಕೂ ತಮಿಳುನಾಡಿಗೂ ನಂಟು ಕಲ್ಪಿಸುವ ಹೇಳಿಕೆ ; ಕ್ಷಮೆ ಕೋರಿದ ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ | Photo: PTI
ಬೆಂಗಳೂರು: ಬೆಂಗಳೂರಿನ ರಾಮೇಶ್ವರಮ್ ಕೆಫೆಯಲ್ಲಿ ಮಾರ್ಚ್ ಒಂದರಂದು ನಡೆದ ಸ್ಫೋಟಕ್ಕೂ ತಮಿಳುನಾಡಿಗೂ ನಂಟು ಕಲ್ಪಿಸುವ ತನ್ನ ಹೇಳಿಕೆಗೆ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮಂಗಳವಾರ ಕ್ಷಮೆ ಕೋರಿದ್ದಾರೆ.
ಮಂಗಳವಾರ ಬೆಳಗ್ಗೆ ಹೇಳಿಕೆಯೊಂದನ್ನು ನೀಡಿದ್ದ ಕರಂದ್ಲಾಜೆ, ‘‘ತಮಿಳುನಾಡಿನ ಜನರು ಅಲ್ಲಿ ತರಬೇತಿ ಪಡೆದು ಇಲ್ಲಿಗೆ (ಬೆಂಗಳೂರು) ಬರುತ್ತಾರೆ ಮತ್ತು ಇಲ್ಲಿ ಬಾಂಬ್ ಗಳನ್ನು ಇಡುತ್ತಾರೆ. ಕೆಫೆಯಲ್ಲಿ ಅವರು ಬಾಂಬ್ ಇಟ್ಟಿದ್ದಾರೆ’’ ಎಂದು ಹೇಳಿದ್ದರು.
ಬೆಂಗಳೂರಿನಲ್ಲಿ ಆಝಾನ್ ವೇಳೆ ಹನುಮಾನ್ ಚಾಳೀಸ ಹಾಕಿರುವುದಕ್ಕಾಗಿ ಅಂಗಡಿ ಮಾಲೀಕರೊಬ್ಬರ ಮೇಲೆ ಇತ್ತೀಚೆಗೆ ನಡೆದ ಆಕ್ರಮಣದ ಹಿನ್ನೆಲೆಯಲ್ಲಿ, ರಾಜ್ಯದ ಗೃಹ ಸಚಿವ ಜಿ.ಪರಮೇಶ್ವರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಧರಣಿ ನಡೆದಿತ್ತು. ಧರಣಿಯನ್ನು ಉದ್ದೇಶಿಸಿ ಭಾಷಣ ಮಾಡಿದ ವೇಳೆ ಕರಂದ್ಲಾಜೆ ಈ ಮಾತುಗಳನ್ನು ಹೇಳಿದ್ದರು.
ಮಂಗಳವಾರ ಸಂಜೆ ಕರಂದ್ಲಾಜೆ ತನ್ನ ಹೇಳಿಕೆಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆ ಕೋರಿದ್ದಾರೆ. ‘‘ನನ್ನ ಮಾತುಗಳ ಉದ್ದೇಶ ಬೆಳಕು ಹರಿಸುವುದು, ನೆರಳು ಉಂಟುಮಾಡುವುದಲ್ಲ’’ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ಸಹಾಯಕ ಸಚಿವೆ ತನ್ನ ಹೇಳಿಕೆಯಲ್ಲಿ ಬರೆದಿದ್ದಾರೆ. ನನ್ನ ಹೇಳಿಕೆಗಳನ್ನು ವಾಪಸ್ ಪಡೆಯುವುದಾಗಿಯೂ ಅವರು ಹೇಳಿದ್ದಾರೆ.
‘‘ಆದರೂ, ನನ್ನ ಹೇಳಿಕೆಗಳು ಕೆಲವರಿಗೆ ನೋವು ತಂದಿರುವುದನ್ನು ನೋಡಿದ್ದೇನೆ. ಅದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ. ರಾಮೇಶ್ವರಮ್ ಕೆಫೆ ಸ್ಫೋಟದಲ್ಲಿ ನಂಟು ಹೊಂದಿರುವ ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದವರಿಗೆ ಮಾತ್ರ ನನ್ನ ಮಾತುಗಳು ಅನ್ವಯವಾಗುತ್ತವೆ’’ ಎಂದು ಅವರು ಬರೆದಿದ್ದಾರೆ.
ಮಂಗಳವಾರ, ಶೋಭಾ ಕರಂದ್ಲಾಜೆಯ ಮಾತುಗಳಿಗೆ ಪ್ರತಿಕ್ರಿಯಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್, ಕೇಂದ್ರ ಸಚಿವೆ ನಿರ್ಲಕ್ಷ್ಯದ ಹೇಳಿಕೆಯನ್ನು ನೀಡಿದ್ದಾರೆ ಎಂದು ಹೇಳಿದ್ದರು. ‘‘ದ್ವೇಷದ ಮಾತುಗಳನ್ನು’’ ಗಣನೆಗೆ ತೆಗೆದುಕೊಂಡು ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗವನ್ನು ಅವರು ಒತ್ತಾಯಿಸಿದ್ದರು.
‘‘ಶಾಂತಿ, ಸೌಹಾರ್ದ ಮತ್ತು ರಾಷ್ಟ್ರೀಯ ಏಕತೆಗೆ ಬೆದರಿಕೆಯೊಡ್ಡಿರುವುದಕ್ಕಾಗಿ’’ ಕರಂದ್ಲಾಜೆ ವಿರುದ್ಧ ಕಾನೂನು ಕ್ರಮಕ್ಕಾಗಿ ಮುಖ್ಯಮಂತ್ರಿ ಕರೆ ನೀಡಿದ್ದರು.
‘‘ಬಿಜೆಪಿಯ ಈ ವಿಭಜನಕಾರಿ ಅಬ್ಬರದ ಮಾತುಗಳನ್ನು ತಮಿಳರು ಮತ್ತು ಕನ್ನಡಿಗರಿಬ್ಬರೂ ತಿರಸ್ಕರಿಸುತ್ತಾರೆ. ಪ್ರಧಾನಿಯಿಂದ ಹಿಡಿದು ಕಾರ್ಯಕರ್ತರವರೆಗೆ ಬಿಜೆಪಿಯಲ್ಲಿರುವ ಎಲ್ಲರೂ ಇಂಥ ಕೊಳಕು ವಿಭಜನಕಾರಿ ರಾಜಕೀಯದಲ್ಲಿ ತೊಡಗುವುದು ಒಮ್ಮೆ ನಿಲ್ಲಿಸಬೇಕು’’ ಎಂದು ಅವರು ಹೇಳಿದ್ದರು.