ಬಾಲ್ಯವಿವಾಹದಿಂದ ತಪ್ಪಿಸಿಕೊಂಡ ವಿದ್ಯಾರ್ಥಿನಿ ಎಸ್ಎಸ್ ಸಿ ಟಾಪರ್!
Photo: twitter.com/sudhakarudumula
ತಿರುಪತಿ: ಬಾಲ್ಯವಿವಾಹದಿಂದ ತಪ್ಪಿಸಿಕೊಂಡು ಎಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿ ಶಿಕ್ಷಣ ಮುಂದುವರಿಸುವ ಕೆಚ್ಚು ತೋರಿದ ವಿದ್ಯಾರ್ಥಿನಿ ಆಂಧ್ರಪ್ರದೇಶದ ಇಂಟರ್ಮೀಡಿಯೇಟ್ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿ ದೇಶದ ಗಮನ ಸೆಳೆದಿದ್ದಾಳೆ.
ಕರ್ನೂಲ್ ಜಿಲ್ಲೆಯ ಪೆದ್ದ ಹರಿವನಂ ಗ್ರಾಮದ ಎಸ್.ನಿರ್ಮಲಾ ಎಸ್ಎಸ್ಸಿ ಪರೀಕ್ಷೆಯಲ್ಲಿ 440ರ ಪೈಕಿ 421 (ಶೇಕಡ 95.7) ಅಂಕ ಗಳಿಸಿ ಅಗ್ರಸ್ಥಾನ ಪಡೆದಿದ್ದಾಳೆ. ವಿದ್ಯಾರ್ಥಿ ಜೀವನದುದ್ದಕ್ಕೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಈಕೆ 10ನ ತರಗತಿ ಪರೀಕ್ಷೆಯಲ್ಲಿ 600ಕ್ಕೆ 537 ಅಂದರೆ ಶೇಕಡ 89.5ರಷ್ಟು ಅಂಕ ಪಡೆದಿದ್ದಳು.
ಬಡ ಪೋಷಕರು ಈಗಾಗಲೇ ಮೂವರು ಪುತ್ರಿಯರನ್ನು ಎಳೆ ವಯಸ್ಸಿನಲ್ಲೇ ವಿವಾಹ ಮಾಡಿಕೊಟ್ಟಿದ್ದು, ನಾಲ್ಕು ಮಂದಿಯ ಪೈಕಿ ಕಿರಿಯವಳಾದ ನಿರ್ಮಲಾಗೆ ಕೂಡಾ ಬಾಲ್ಯವಿವಾಹಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಶಿಕ್ಷಣಕ್ಕೆ ಇನ್ನು ಹಣ ಹೊಂದಿಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಆಕೆಯನ್ನು ವಿವಾಹಕ್ಕೆ ಒಪ್ಪಿಸಲು ಪ್ರಯತ್ನಿಸಿದ್ದರು.
ಪಕ್ಕದಲ್ಲಿ ಜೂನಿಯರ್ ಕಾಲೇಜ್ ಕೂಡಾ ಇಲ್ಲದಿರುವುದರಿಂದ ತರಗತಿಗಳಿಗೆ ದೂರದ ಪ್ರದೇಶಕ್ಕೆ ತೆರಳುವುದು ಕಷ್ಟವಾಗಿತ್ತು. ಆದರೆ ತನ್ನ ಶಿಕ್ಷಣ ಮುಂದುವರಿಸುವ ಅಚಲ ನಿರ್ಧಾರ ಕೈಗೊಂಡ ನಿರ್ಮಲಾ, ಕಳೆದ ವರ್ಷ ಸ್ಥಳೀಯ ಶಾಶಕ ವೈ.ಸಾಯಿಪ್ರಸಾದ್ ರೆಡ್ಡಿಯವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಳು.
ಶಾಸಕ ಈ ಬಗ್ಗೆ ಜಿಲ್ಲಾಧಿಕಾರಿ ಎಸ್.ಸುರ್ಜನಾ ಅವರಿಗೆ ಮಾಹಿತಿ ನೀಡಿದ್ದರು. ಜಿಲ್ಲಾಧಿಕಾರಿ ಮಧ್ಯಪ್ರವೇಶದ ಬಳಿಕ ವಿದ್ಯಾರ್ಥಿನಿಯನ್ನು ಅಸ್ಪರಿಯ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯಕ್ಕೆ ಸೇರಿಸಲಾಗಿತ್ತು. ಈ ಅವಕಾಶವನ್ನು ಬಳಸಿಕೊಂಡ ನಿರ್ಮಲಾ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾಳೆ. ಮುಂದೆ ಐಎಎಸ್ ಅಧಿಕಾರಿಯಾಗಿ ಬಾಲ್ಯವಿವಾಹ ತಡೆಯುವುದು ಮತ್ತು ಹೆಣ್ಣುಮಕ್ಕಳು ಶಿಕ್ಷಣ ಮುಂದುವರಿಸುವಂತೆ ಪ್ರೇರೇಪಿಸುವುದು ಈಕೆಯ ಗುರಿ.