ಸ್ಟಾರ್ಟ್ಅಪ್ಗೆ ಪೂರಕ ಪರಿಸರ ; ಗುಜರಾತ್, ಕರ್ನಾಟಕಕ್ಕೆ ಅಗ್ರಸ್ಥಾನ
Photo: freepik
ಹೊಸದಿಲ್ಲಿ : ಉದಯೋನ್ಮುಖ ಉದ್ಯಮಿಗಳಿಗೆ ಹಿತಕರವಾದ ಸ್ಟಾರ್ಟ್ಅಪ್ ಪರಿಸರವನ್ನು ಅಭಿವೃದ್ಧಿಪಡಿಸುವಲ್ಲಿ ಗುಜರಾತ್ ಹಾಗೂ ಕರ್ನಾಟಕ ರಾಜ್ಯಗಳು ಅತ್ಯುತ್ತಮ ನಿರ್ವಹಣೆಯನ್ನು ಪ್ರದರ್ಶಿಸಿವೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕೈಗಾರಿಕಾ ಹಾಗೂ ಆಂತರಿಕ ವಾಣಿಜ್ಯ ಉತ್ತೇಜನ ಇಲಾಖೆ (ಡಿಪಿಐಐಟಿ) ಈ ಬಗ್ಗೆ ಮಂಗಳವಾರ ರ್ಯಾಂಕಿಂಗ್ ಪಟ್ಟಿಯೊಂದನ್ನು ಪ್ರಕಟಿಸಿದೆ.
ಕೇರಳ, ತಮಿಳುನಾಡು ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳು ಕೂಡಾ ಶ್ರೇಷ್ಠ ನಿರ್ವಹಣೆಯನ್ನು ಪ್ರದರ್ಶಿಸಿದ ರಾಜ್ಯಗಳ ಸಾಲಿಗೆ ಸೇರ್ಪಡೆಗೊಂಡಿವೆ.
ಸ್ಟಾರ್ಟ್ಅಪ್ ಉದ್ಯಮಗಳ ಬೆಳವಣಿಗೆಗೆ ಪೂರವಕಾದ ಪರಿಸರ ವಯವಸ್ಥೆಯನ್ನು ನಿರ್ಮಿಸುವಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಡೆಸಿದ ಪ್ರಯತ್ನಗಳನ್ನು ವಾರ್ಷಿಕವಾಗಿ ಮೌಲ್ಯಮಾಪನ ಮಾಡಿದ ಬಳಿಕ ಡಿಪಿಪಿಐಟಿ ಈ ರ್ಯಾಂಕಿಂಗ್ ಪ್ರಕ್ರಿಯೆಯನ್ನು ನಡೆಸುತ್ತದೆ.
ಈ ಪ್ರಕ್ರಿಯೆಯಲ್ಲಿ ಒಟ್ಟು 33 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಬಾಗವಹಿಸಿದ್ದವು. ಶ್ರೇಷ್ಠ ನಿರ್ವಹಣೆ, ಉತ್ತಮ ನಿರ್ವಹಣೆ, ನಾಯಕರು, ಆಕಾಂಕ್ಷಿ ನಾಯಕರು ಹಾಗೂ ಉದಯೋನ್ಮುಖ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆ ಶ್ರೇಣಿಗಳಡಿ ಡಿಪಿಐಐಟಿ ಈ ರ್ಯಾಂಕಿಂಗ್ ಅನ್ನು ನೀಡುತ್ತದೆ.
1 ಕೋಟಿಗಿಂತ ಅಧಿಕ ಹಾಗೂ 1 ಕೋಟಿಗಿಂತ ಕೆಳಗಿನ ಜನಸಂಖ್ಯೆಯನ್ನು ಆಧರಿಸಿ ಆಯಾ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳನ್ನು ಎರಡು ವಿಭಾಗಗಳಾಗಿ ಗುರುತಿಸಲಾಗಿದೆ.
ಸತತ ನಾಲ್ಕನೇ ಬಾರಿಗೆ ಗುಜರಾತ್ ರಾಜ್ಯವು ಅತ್ಯುತ್ತಮ ನಿರ್ವಹಣೆಯ ರಾಜ್ಯವೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಕರ್ನಾಟಕವು ಸತತ ಎರಡನೆ ಬಾರಿಗೆ ಈ ಶ್ರೇಣಿಯಲ್ಲಿ ರ್ಯಾಂಕಿಂಗ್ ಅನ್ನು ಪಡೆದುಕೊಂಡಿದೆ.
ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತೆಲಂಗಾಣ,ಅರುಣಾಚಲಪ್ರದೇಶ ಹಾಗೂ ಮೇಘಾಲಯ ರಾಜ್ಯಗಳು ಶ್ರೇಷ್ಠ ನಿರ್ವಹಣೆಯ ರಾಜ್ಯಗಳ ಸ್ಥಾನವನ್ನು ಪಡೆದುಕೊಂಡಿದೆ.
ಆಂಧ್ರಪ್ರದೇಶ, ಮಧ್ಯಪ್ರದೇಶ, ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಹಾಗೂ ತ್ರಿಪುರಾ ಈ ಸ್ಟಾರ್ಟ್ಅಪ್ ಕ್ಷೇತ್ರ ನಾಯಕ ಶ್ರೇಣಿಯಡಿ ರ್ಯಾಂಕಿಂಗ್ ಪಡೆದುಕೊಂಡಿವೆ.