ಅಯೋಧ್ಯೆ ಕಾರ್ಯಕ್ರಮಕ್ಕೆ ಸಾವಿರ ವಿಶೇಷ ರೈಲು!
ರಾಮಮಂದಿರ Photo: PTI
ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಇರುವ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಉದ್ಘಾಟನಾ ಕಾರ್ಯಕ್ರಮದ ಆಸು ಪಾಸಿನ 100 ದಿನಗಳಲ್ಲಿ ದೇಶದ ವಿವಿಧ ಭಾಗಗಳಿಂದ 1000 ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.
ಈ ವಿಶೇಷ ರೈಲುಗಳ ಕಾರ್ಯಾಚರಣೆ ಉದ್ಘಾಟನೆಗಿಂತ ಕೆಲ ದಿನಗಳ ಮೊದಲು (ಜನವರಿ 19ರಂದು) ಆರಂಭವಾಗಲಿದ್ದು, ಕಾರ್ಯಕ್ರಮಕ್ಕೆ ಯಾತ್ರಾರ್ಥಿಗಳು ದೇಶದ ವಿವಿಧೆಡೆಗಳಿಂದ ಭಾಗವಹಿಸಲು ಇದು ಅನುವು ಮಾಡಿಕೊಡಲಿದೆ.
ರಾಮನ ಮೂರ್ತಿ ಪ್ರತಿಷ್ಠಾಪನೆ ಬಳಿಕ ಜನವರಿ 23ರಂದು ಮಂದಿರ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿದೆ. ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಪುಣೆ, ಕೊಲ್ಕತ್ತಾ, ನಾಗ್ಪುರ, ಲಕ್ನೋ ಮತ್ತು ಜಮ್ಮು ಹೀಗೆ ದೇಶದ ವಿವಿಧ ಕಡೆಗಳಿಂದ ಅಯೋಧ್ಯೆಗೆ ಯಾತ್ರಾರ್ಥಿಗಳು ಪ್ರಯಾಣಿಸಲು ಈ ವಿಶೇಷ ವ್ಯವಸ್ಥೆ ನೆರವಾಗಲಿದೆ. "ಬೇಡಿಕೆಯನ್ನು ಆಧರಿಸಿದ ರೈಲುಗಳ ಸಂಖ್ಯೆಯನ್ನು ನಿರ್ಧರಿಸಲು ಉದ್ದೇಶಿಸಲಾಗಿದೆ. ದೊಡ್ಡ ಸಂಖ್ಯೆಯ ಪ್ರಯಾಣಿಕರನ್ನು ನಿರ್ವಹಿಸಲು ಸಾಧ್ಯವಾಗುವಂತೆ ಅಯೋಧ್ಯೆ ರೈಲು ನಿಲ್ದಾಣವನ್ನು ನವೀಕರಿಸಲಾಗಿದೆ" ಎಂದು ಮೂಲಗಳು ಹೇಳಿವೆ.
ರೈಲ್ವೆಯ ಕೇಟರಿಂಗ್ ಮತ್ತು ಟಿಕೆಟಿಂಗ್ ಸಂಸ್ಥೆಯಾದ ಐಆರ್ ಸಿಟಿಸಿ, ಈ 10-15 ದಿನಗಳ ಅವಧಿಯಲ್ಲಿ ಅಯೋಧ್ಯೆಗೆ ದೊಡ್ಡ ಸಂಖ್ಯೆಯಲ್ಲಿ ಆಗಮಿಸುವ ಯಾತ್ರಾರ್ಥಿಗಳಿಗೆ ಆಹಾರ ಸೇವೆಯನ್ನು ಒದಗಿಸಲು ಕೂಡಾ ಸಜ್ಜಾಗುತ್ತಿದೆ. ಹೆಚ್ಚಿನ ಬೇಡಿಕೆಯನ್ನು ಈಡೇರಿಸಲು ಅನುವಾಗುವಂತೆ ಹೆಚ್ಚಿನ ಆಹಾರ ಮಳಿಗೆಗಳನ್ನೂ ತೆರೆಯಲಿದೆ.