ಪತನದ ಅಂಚಿನಲ್ಲಿ ವಾಲುವ ಗೋಪುರ; ಇಟಲಿಯ ಬೊಲೊಗ್ನಾ ನಗರದಲ್ಲಿ ಕಟ್ಟೆಚ್ಚರ
Photograph: Ian Dagnall/Alamy
ಬೊಲೊಗ್ನಾ (ಇಟಲಿ): 1,000 ವರ್ಷಗಳಿಂದ ಸ್ಥಿರವಾಗಿ ನಿಂತಿದ್ದ, ವಾಲುವ ಗೋಪುರ ಎಂದೇ ಖ್ಯಾತಗೊಂಡಿದ್ದ ಬೊಲೊಗ್ನಾದಲ್ಲಿನ ಗ್ಯಾರಿಸೆಂಡಾ ಗೋಪುರವು ತೀವ್ರವಾಗಿ ವಾಲಿರುವುದರಿಂದ ಪತನದ ಅಂಚಿನಲ್ಲಿದೆ ಎಂದು ವರದಿಯಾಗಿದೆ.
150 ಅಡಿಯ ಈ ಗೋಪುರವನ್ನು ಸುಸ್ಥಿರಗೊಳಿಸಲು, ಅದರ ಮೇಲಿನ ಕಟ್ಟಡವನ್ನು ತೆರವುಗೊಳಿಸಲು ಅಧಿಕಾರಿಗಳು ಯತ್ನಿಸಿದಾಗಿನಿಂದ, 14ನೇ ಶತಮಾನದಿಂದಲೂ ಈ ಗೋಪುರವು 4 ಡಿಗ್ರಿ ಕೋನದಲ್ಲಿ ವಾಲುತ್ತಾ ಬರುತ್ತಿದೆ. ಇದೇ ರೀತಿ ಪೀಸಾ ಗೋಪುರವೂ 5 ಡಿಗ್ರಿ ಕೋನದಲ್ಲಿ ವಾಲುತ್ತಾ ಬರುತ್ತಿದೆ.
ಈ ಗೋಪುರದ ದೃಢತೆಯನ್ನು ಕಾಪಾಡಲು ಇಟಲಿ ದೇಶವು ಹಲವಾರು ವರ್ಷಗಳಿಂದ ವ್ಯಾಪಕ ಕೆಲಸ ಮಾಡಿದೆ.
ಆದರೀಗ, ಈ ಗೋಪುರವು ತೀವ್ರ ಸ್ವರೂಪದಲ್ಲಿ ವಾಲುತ್ತಿದ್ದು, ಇದರಿಂದಾಗಿ ಗೋಪುರಕ್ಕೆ ರಕ್ಷಣೆ ಒದಗಿಸುವ ಕಾಮಗಾರಿಯನ್ನು ಕೈಗೊಳ್ಳಬೇಕಾದ ಒತ್ತಡಕ್ಕೆ ನಗರದ ಅಧಿಕಾರಿಗಳು ಸಿಲುಕಿದ್ದಾರೆ. CNN ಸುದ್ದಿ ಸಂಸ್ಥೆ ಪ್ರಕಾರ, ಈ ಗೋಪುರವು ದಿಢೀರ್ ಹಾಗೂ ಅನಿರೀಕ್ಷಿತವಾಗಿ ಪತನವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಒಂದು ವೇಳೆ ಗೋಪುರವೇನಾದರೂ ಪತನಗೊಂಡರೆ, ಅದರ ಸುತ್ತಲಿನ ಕಟ್ಟಡಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಇದೀಗ ಅದರ ಸುತ್ತ ಲೋಹದ ಬೇಲಿಯೊಂದನ್ನು ನಿರ್ಮಿಸಲಾಗಿದೆ.
ಗೋಪುರವು ಯಾವುದೇ ಕ್ಷಣದಲ್ಲಾದರೂ ಪತನಗೊಳ್ಳಬಹುದು ಎಂಬ ವರದಿ ಬರುತ್ತಿದ್ದಂತೆಯೆ, ಅಧಿಕಾರಿಗಳು ಗೋಪುರದತ್ತ ತೆರಳುವ ಎಲ್ಲ ಮಾರ್ಗಗಳನ್ನೂ ಬಂದ್ ಮಾಡಿದ್ದಾರೆ.