ಉತ್ತರ ಪ್ರದೇಶ | ಡಿಸಿಎಂ ಆಧಾರ್ ಕಾರ್ಡ್ ನೀಡಲು 1,500 ರೂ. ಪಡೆದ ಆಧಾರ್ ಕಾರ್ಡ್ ಮಾರಾಟ ಜಾಲ!

ಆಧಾರ್ ಕಾರ್ಡ್ | ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಸೂಕ್ತ ಬೆಲೆ ತೆತ್ತು ಯಾವ ವಸ್ತುವನ್ನಾದರೂ ಖರೀದಿಸಬಹುದಾದ ಜಾಗತೀಕರಣದ ಕಾಲಘಟ್ಟವಿದು. ಆದರೆ, ಗುರುತಿನ ಚೀಟಿ? ಅದನ್ನೂ ಸಾಧ್ಯವಾಗಿಸಿದೆ ಲಕ್ನೊದಲ್ಲಿರುವ ಒಂದು ಆಧಾರ್ ಸೇವಾ ಕೇಂದ್ರ! ಈ ಆಧಾರ್ ಸೇವಾ ಕೇಂದ್ರ ಜನರಿಗೆ ಅಂಥಿಂಥ ಸೇವೆ ನೀಡುತ್ತಿಲ್ಲ! ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರ ಆಧಾರ್ ಗುರುತಿನ ಚೀಟಿಯನ್ನೇ 1,500 ರೂ. ದರಕ್ಕೆ ತಯಾರು ಮಾಡಿಕೊಟ್ಟಿದೆ ಎಂದು The Times of India ಸುದ್ದಿ ಸಂಸ್ಥೆ ವರದಿ ಮಾಡಿದೆ.
“ನಾನು ಬಕ್ಷಿಕ ತಾಲಾಬ್ ಪ್ರದೇಶದವನಾಗಿದ್ದು, ನಾನು ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ನಾನು ನನ್ನ ಹೆಸರಿನ ಕಾಗುಣಿತವನ್ನು Brijesh Pathak ಬದಲು Brajesh Pathak ಎಂದು ಬದಲಿಸಿಕೊಳ್ಳಲು ಬಯಸಿದ್ದೇನೆ. ಆದರೆ, ಅದಕ್ಕೆ ಪೂರಕವಾಗುವಂತಹ ಯಾವುದೇ ದಾಖಲೆ ನನ್ನ ಬಳಿ ಇಲ್ಲ”, ಎಂದು ರಾಜೇಶ್ ಎಂದು ತನ್ನನ್ನು ತಾನು ಗುರುತಿಸಿಕೊಂಡಿರುವ ಆಧಾರ್ ಕಾರ್ಡ್ ಮಾರಾಟ ಜಾಲದ ಸದಸ್ಯನೊಬ್ಬನಿಗೆ ಈ ಕುರಿತು ಸ್ಟಿಂಗ್ ಕಾರ್ಯಾಚರಣೆ ನಡೆಸಿರುವ The Times of India ಸುದ್ದಿ ಸಂಸ್ಥೆಯ ವರದಿಗಾರರೊಬ್ಬರು ಧ್ವನಿ ಸಂದೇಶ ರವಾನಿಸಿದ್ದಾರೆ.
ಇದಕ್ಕೆ ಸಮ್ಮತಿಸಿರುವ ಆಧಾರ್ ಕಾರ್ಡ್ ಮಾರಾಟ ಜಾಲದ ಸದಸ್ಯನು, ಮೊದಲಿಗೆ ಬ್ರಜೇಶ್ ಪಾಠಕ್ ಎಂಬ ಮತ್ತೊಬ್ಬ ವ್ಯಕ್ತಿಯ ಚುನಾವಣಾ ಗುರುತಿನ ಚೀಟಿಯನ್ನು ಡೌನ್ ಲೋಡ್ ಮಾಡಿಕೊಂಡಿದ್ದಾನೆ. ನಂತರ, ಆ ಗುರುತಿನ ಚೀಟಿಯಲ್ಲಿದ್ದ ಫೋಟೊ ಜಾಗದಲ್ಲಿ The Times of India ಸುದ್ದಿ ಸಂಸ್ಥೆಯ ವರದಿಗಾರನ ಫೋಟೊ ಬದಲಿಸಿ, ಅದಕ್ಕೆ ನಕಲಿ ಬಾರ್ ಕೋಡ್ ಸೇರಿಸಿದ್ದಾನೆ. ಇದಾದ ಕೆಲ ನಿಮಿಷಗಳ ನಂತರ ಹಾಗೂ 1,500 ರೂ. ಲಂಚ ತೆತ್ತ ನಂತರ, ಅದೇ ದಿನ ಮಧ್ಯಾಹ್ನ ಆಧಾರ್ ವಿವರವನ್ನು ಅಪ್ಡೇಟ್ ಮಾಡಲು ಸಂದರ್ಶನದ ಸಮಯವನ್ನು ನಿಗದಿಗೊಳಿಸಲಾಗಿದೆ.
“ನೇರವಾಗಿ ಪರಿಶೀಲಕನ ಬಳಿಗೆ ತೆರಳಿ. ಯಾವುದೇ ಪ್ರಶ್ನೆ ಕೇಳುವುದಿಲ್ಲ” ಎಂದು ಆ ಆಧಾರ್ ಕಾರ್ಡ್ ಮಾರಾಟ ಜಾಲದ ಸದಸ್ಯ ನನಗೆ ಹೇಳಿದ ಎಂದು The Times of India ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ರಾಜೇಶ್ ಭರವಸೆ ನೀಡಿದ್ದಂತೆಯೆ ಎಲ್ಲವೂ ನಿಖರವಾಗಿ ನಡೆದಿದ್ದು, ನೈಜ ಅರ್ಜಿದಾರರ ಸರದಿ ಬರುವುದಕ್ಕೂ ಮುನ್ನ, ಆಧಾರ್ ಕಾರ್ಡ್ ಮಾರಾಟ ಜಾಲದ ಸದಸ್ಯನ ನೆರವಿನೊಂದಿಗೆ ಅಲ್ಲಿಗೆ ತೆರಳಿದ್ದ The Times of India ಸುದ್ದಿ ಸಂಸ್ಥೆಯ ವರದಿಗಾರ ಸೇರಿದಂತೆ ಸುಮಾರು 20 ಮಂದಿಯನ್ನು ಆಧಾರ್ ಅಪ್ಡೇಟ್ ಗೆ ಕರೆಯಲಾಗಿದೆ.
ಕೇವಲ ಒಂದು ಗಂಟೆ ಅವಧಿಗಿಂತಲೂ ಮುಂಚಿತವಾಗಿಯೇ, ಸದರಿ ಆಧಾರ್ ಸೇವಾ ಕೇಂದ್ರದ ಸಿಬ್ಬಂದಿಯೊಬ್ಬರು ಅವರ ಅಕ್ಷಿಪಟಲವನ್ನು ಸ್ಕ್ಯಾನ್ ಮಾಡಿದ್ದು, ಆಧಾರ್ ಅಪ್ಡೇಟ್ ಅನ್ನು ಮುಗಿಸಿದ್ದಾರೆ. ಇದರ ಬೆನ್ನಿಗೇ, ಅವರಿಗೆ ಹೊಸ ಗುರುತಿಗೆ ಜನ್ಮ ನೀಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಫ್ರಾನ್ಸ್ ನ ಬಹುರಾಷ್ಟ್ರೀಯ ಕಂಪನಿ IDEMIA ಸಮೂಹದ ಭಾರತೀಯ ಅಂಗ ಸಂಸ್ಥೆಯಾದ ಸ್ಮಾರ್ಟ್ ಚಿಪ್ ಪ್ರೈವೇಟ್ ಲಿಮಿಟೆಡ್ ಕಾರ್ಯಾಚರಿಸುತ್ತಿರುವ ಈ ಆಧಾರ್ ಸೇವಾ ಕೇಂದ್ರ ಸದ್ಯ ಪ್ರಶ್ನೆಗೊಳಗಾಗಿರುವ ಸಂಸ್ಥೆಯಾಗಿದೆ. ಆದರೆ, ಈ ಸಂಸ್ಥೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿರುವುದರಿಂದ, ಈ ಕುರಿತು ಅದು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ನಡುವೆ, “ಇತ್ತೀಚೆಗೆ ಎಎಸ್ಕೆ ರತನ್ ಚೌಕದ ಬಳಿ ನಡೆದಿದ್ದ ದಿಢೀರ್ ತಪಾಸಣೆಯ ವೇಳೆ ಈ ಅಕ್ರಮಗಳು ಪತ್ತೆಯಾಗಿದ್ದವು. ಹೀಗಾಗಿ, ಈ ಕುರಿತು ಎಪ್ರಿಲ್ 21ರಂದು ನಡೆಸಲಾಗಿದ್ದ ಮುಸುಕಿನ ಕಾರ್ಯಾಚರಣೆಯಲ್ಲಿ ಈ ಅಕ್ರಮಗಳ ಕಾರ್ಯವಿಧಾನವನ್ನು ಬಯಲು ಮಾಡಲಾಗಿತ್ತು. ಈ ವಿಷಯದ ಕುರಿತು ತನಿಖೆ ನಡೆಸುವಂತೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ದೂರು ನೀಡಲಾಗಿದೆ ಹಾಗೂ ಈ ಸಂಬಂಧ ಎಫ್ಐಆರ್ ಅನ್ನೂ ದಾಖಲಿಸಲಾಗಿದೆ. ದಾಖಲೆಗಳ ನೈಜತೆಯನ್ನು ಪರಿಶೀಲಿಸಿ, ಯಾವುದೇ ನಕಲಿ ಸಲ್ಲಿಕೆಗಳನ್ನು ತಿರಸ್ಕರಿಸುವ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಎಲ್ಲ ಬ್ಯಾಕ್ ಎಂಡ್ ಪರಿಶೀಲನೆಗಳ ಕುರಿತು ನಾವು ಭರವಸೆ ನೀಡುತ್ತೇವೆ”,ಎಂದು ಅವರು ಉತ್ತರ ನೀಡಿದ್ದಾರೆ.