ಜನ್ಮ ದಿನಾಂಕ ಪುರಾವೆಯಾಗಿ ಆಧಾರ್ ಅನ್ನು ಕೈಬಿಟ್ಟ ಭವಿಷ್ಯನಿಧಿ ಸಂಸ್ಥೆ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ)ಯು ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಿಂದ ಆಧಾರ್ ಅನ್ನು ಅಧಿಕೃತವಾಗಿ ಕೈಬಿಟ್ಟಿದೆ.
ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ದ ನಿರ್ದೇಶನಕ್ಕೆ ಅನುಗುಣವಾಗಿ ಈ ಬಗ್ಗೆ ಸುತ್ತೋಲೆಯನ್ನು ಇಪಿಎಫ್ಒ ಹೊರಡಿಸಿದೆ.
ಈ ಮೊದಲು ವಿವಿಧ ಇ-ಕೆವೈಸಿ ಬಳಕೆದಾರ ಮತ್ತು ಆಧಾರ ದೃಢೀಕರಣ ಏಜೆನ್ಸಿಗಳು ಜನ್ಮ ದಿನಾಂಕವನ್ನು ಪರಿಶೀಲಿಸಲು ಆಧಾರ್ ಕಾರ್ಡ್ ಅಥವಾ ಇ-ಆಧಾರ್ ಅನ್ನು ಸೂಕ್ತ ದಾಖಲೆಯನ್ನಾಗಿ ಅಂಗೀಕರಿಸಿದ್ದವು.
ಆದರೆ,ಆಧಾರ್ ವಿಶಿಷ್ಟ ಗುರುತಿನ ಪುರಾವೆಯಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಆಧಾರ್ ಕಾಯ್ದೆ ೨೦೧೬ರ ನಿಬಂಧನೆಗಳಡಿ ಜನ್ಮ ದಿನಾಂಕದ ಪುರಾವೆಯಾಗಿ ಅರ್ಹತೆಯನ್ನು ಹೊಂದಿಲ್ಲ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.
ಈಗ ನೀವೇನು ಮಾಡಬೇಕು?
ಆಧಾರ್ ಅನ್ನು ಅಧಿಕೃತವಾಗಿ ಹೊರಗಿಡಲಾಗಿರುವುದರಿಂದ ಜನ್ಮ ದಿನಾಂಕ ವಿವಾದದ ಸಂದರ್ಭದಲ್ಲಿ ಈ ಕೆಳಗಿನ ಯಾವುದೇ ದಾಖಲೆಯನ್ನು ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕರಿಸಬಹುದು ಎಂದು ಇಪಿಎಫ್ಒ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.
►ಜನನ ಮತ್ತು ಮರಣಗಳ ನೋಂದಣಾಧಿಕಾರಿಗಳು ನೀಡಿರುವ ಜನನ ಪ್ರಮಾಣಪತ್ರ
►ಯಾವುದೇ ಶಾಲೆ/ಶಿಕ್ಷಣ ಸಂಬಂಧಿತ ಪ್ರಮಾಣಪತ್ರ
►ಕೇಂದ್ರ/ರಾಜ್ಯ ಸರಕಾರಿ ಸಂಸ್ಥೆಗಳ ಸೇವಾ ದಾಖಲೆಗಳನ್ನು ಆಧರಿಸಿದ ಪ್ರಮಾಣಪತ್ರ
►ಪಾಸ್ಪೋರ್ಟ್
►ಸರಕಾರಿ ಇಲಾಖೆಯಿಂದ ನೀಡಲಾದ ಇತರ ಯಾವುದೇ ವಿಶ್ವಾಸಾರ್ಹ ದಾಖಲೆ
►ಈ ಮೇಲಿನ ಜನ್ಮ ದಿನಾಂಕ ಪುರಾವೆಗಳು ಇಲ್ಲದಿದ್ದಲ್ಲಿ ಸದಸ್ಯನನ್ನು ವೈದ್ಯಕೀಯವಾಗಿ ಪರಿಶೀಲಿಸಿದ ಬಳಿಕ ಸಿವಿಲ್ ಸರ್ಜನ್ ನೀಡಿರುವ ವೈದ್ಯಕೀಯ ಪ್ರಮಾಣಪತ್ರದ ಜೊತೆಗೆ ಸಕ್ಷಮ ನ್ಯಾಯಾಲಯದಿಂದ ದೃಢೀಕೃತ ಸದಸ್ಯರ ಪ್ರಮಾಣದೊಂದಿಗೆ ಅಫಿಡವಿಟ್ನ್ನು ಸಲ್ಲಿಸಬಹುದು.
ಕಾನೂನು ಚೌಕಟ್ಟಿನ ಅನುಸರಣೆಯನ್ನು ಖಚಿತಪಡಿಸುವುದು ಇಪಿಎಫ್ಒ ಕ್ರಮದ ಉದ್ದೇಶವಾಗಿದೆ ಮತ್ತು ಆಧಾರ್ ಜನ್ಮದಿನಾಂಕದ ಪುರಾವೆಯಲ್ಲ ಎಂಬ ಸರಣಿ ಕಾನೂನು ಘೋಷಣೆಗಳ ಪಾಲನೆಯಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದ್ದು, ದಾಖಲಾತಿ ಪ್ರಕ್ರಿಯೆಯಲ್ಲಿ ಯಾವುದೇ ವ್ಯತ್ಯಾಸಗಳನ್ನು ತಪ್ಪಿಸಲು ಈ ಬದಲಾವಣೆಗಳನ್ನು ಗಮನಕ್ಕೆ ತೆಗೆದುಕೊಳ್ಳುವಂತೆ ಉದ್ಯೋಗದಾತರು ಮತ್ತು ಉದ್ಯೋಗಿಗಳನ್ನು ಆಗ್ರಹಿಸಲಾಗಿದೆ.