101 ವಿಮಾನ ನಿಲ್ದಾಣಗಳ ನಿರ್ವಹಣೆಗೆ 796 ಕೋಟಿ ವೆಚ್ಚ ಮಾಡಿದ ಸರಕಾರ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರ ಕಳೆದ ಒಂದು ವರ್ಷದಲ್ಲಿ 101 ವಿಮಾನ ನಿಲ್ದಾಣಗಳ ದುರಸ್ತಿ ಮತ್ತು ನಿರ್ವಹಣೆಗೆ ಅಂದಾಜಿಸಿದ್ದ ವೆಚ್ಚಕ್ಕಿಂತ ಶೇಕಡ 20ರಷ್ಟು ಅಧಿಕ ಅಂದರೆ 796 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ.
2021-22ನೇ ಹಣಕಾಸು ವರ್ಷದಿಂದ ವಿಮಾನ ನಿಲ್ದಾಣಗಳ ಮೇಲೆ ಎಎಐ ಮಾಡುತ್ತಿರುವ ವೆಚ್ಚ ಹೆಚ್ಚುತ್ತಲೇ ಇದೆ. 2024 ರ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಈ ವೆಚ್ಚ 795.72 ಕೋಟಿಗೆ ಹೆಚ್ಚಿದೆ. ಹಿಂದಿನ ವರ್ಷ ಇದು 663.42 ಕೋಟಿ ರೂಪಾಯಿಗಳಾಗಿತ್ತು.
2021-22ನೇ ಹಣಕಾಸು ವರ್ಷದಲ್ಲಿ ದುರಸ್ತಿ ಮತ್ತು ನಿರ್ವಹಣೆ ವೆಚ್ಚ 535.02 ಕೋಟಿ ರೂಪಾಯಿ ಎಂದು ನಾಗರಿಕ ವಿಮಾನಯಾನ ಸಚಿವಾಲಯ ರಾಜ್ಯಸಭೆಯಲ್ಲಿ ಹಂಚಿಕೊಂಡ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಒಟ್ಟು 121 ವಿಮಾನ ನಿಲ್ದಾಣಗಳ ಅಂಕಿ ಅಂಶಗಳನ್ನು ಹಂಚಿಕೊಂಡಿದ್ದು, ಈ ಪೈಕಿ 20 ವಿಮಾನ ನಿಲ್ದಾಣಗಳಿಗೆ ಯಾವುದೇ ವೆಚ್ಚ ಮಾಡಿಲ್ಲ.
ದೆಹಲಿ ವಿಮಾ ನಿಲ್ದಾಣದ ಟರ್ಮಿನಲ್ 1ಡಿಯ ಕ್ಯಾನೋಪಿ ಜೂನ್ 28ರಂದು ಕುಸಿದು ಬಿದ್ದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳ ಸುರಕ್ಷತೆ ಬಗ್ಗೆ ಆತಂಕ ಎದುರಾಗಿತ್ತು.