ಶಂಭು ಗಡಿ ಉದ್ವಿಗ್ನತೆಯನ್ನು ವರದಿ ಮಾಡುವಾಗ ಗುಂಡು ತಗುಲಿತು ಎಂದ ಆಜ್ ತಕ್ ವರದಿಗಾರ

Photo: Aaj Tak
ಹೊಸ ದಿಲ್ಲಿ/ಚಂಡೀಗಢ: ಪಂಜಾಬ್ ಮತ್ತು ಹರ್ಯಾಣ ನಡುವಿನ ಶಂಭು ಗಡಿ ಬಳಿಯ ಉದ್ವಿಗ್ನತೆಯನ್ನು ಸೆರೆ ಹಿಡಿಯುವಾಗ ತನಗೆ ಗುಂಡು ತಗುಲಿತು ಎಂದು ಮಂಗಳವಾರ ಮಧ್ಯಾಹ್ನ ಆಜ್ ತಕ್ ವರದಿಗಾರ ಕ್ಯಾಮೆರಾ ಎದುರಿಗೇ ಹೇಳಿದ್ದಾನೆ ಎಂದು newslaundry.com ವರದಿ ಮಾಡಿದೆ.
ಆಜ್ ತಕ್ ಸುದ್ದಿ ವಾಹಿನಿಯ ಸತೇಂದರ್ ಚೌಹಾಣ್ ಗಾಯಗೊಂಡಿರುವುದು ದೃಢಪಟ್ಟಿದೆ. ಸತೇಂದರ್ ಚೌಹಾಣ್ಗೆ ತಗುಲಿರುವುದು ಅಶ್ರುವಾಯು ಶೆಲ್ನ ಚೂರುಗಳು ಎಂದು India Today ಮೂಲಗಳು ತಿಳಿಸಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ.
ಮಂಗಳವಾರ ಪ್ರತಿಭಟನಾನಿರತ ರೈತರ ಗುಂಪೊಂದು ತಡೆಗೋಡೆಗಳನ್ನು ತೆರವುಗೊಳಿಸಲು ಪ್ರಯತ್ನಿಸಿದಾಗ ಹರ್ಯಾಣ ಪೊಲೀಸರು ಅವರ ಮೇಲೆ ಅಶ್ರುವಾಯ ಶೆಲ್ ಪ್ರಯೋಗಿಸಿದರು. ಭಾರಿ ಭದ್ರತೆಯ ನಡುವೆಯೂ ರೈತ ಸಂಘಟನೆಗಳು ರಾಷ್ಟ್ರ ರಾಜಧಾನಿ ದಿಲ್ಲಿಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದಾಗ, ಗಡಿಯ ಬಳಿ ಹಲವು ರೈತರನ್ನು ವಶಕ್ಕೆ ಪಡೆದ ಪೊಲೀಸರು, ಅವರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಸೋಮವಾರ ಸಂಜೆ ರೈತ ಸಂಘಟನೆಗಳ ನಾಯಕರು ಹಾಗೂ ಕೇಂದ್ರ ಸಚಿವರ ನಡುವೆ ನಡೆದ ರೈತರ ಬೇಡಿಕೆಗಳ ಕುರಿತ ಸಭೆಯು ಯಾವುದೇ ಫಲಶ್ರುತಿ ಕಾಣದೆ ನೆನೆಗುದಿಗೆ ಬಿದ್ದ ನಂತರ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಇದಕ್ಕೂ ಮುನ್ನ, ಸೋಮವಾರ ಶಂಭು ಗಡಿಯಿಂದ ವರದಿ ಮಾಡಿದ್ದ ಚೌಹಾಣ್, ರೈತರನ್ನು ತಡೆಯಲು ಅಣಕು ಕಾರ್ಯಾಚರಣೆ ಸೇರಿದಂತೆ ಪೊಲೀಸರು ನಡೆಸಿರುವ ಸಿದ್ಧತೆಯ ದೃಶ್ಯಗಳನ್ನು ವೀಕ್ಷಕರಿಗಾಗಿ ಪ್ರಸಾರ ಮಾಡಿದ್ದರು. "ರೈತರನ್ನು ತಡೆಯಲು ಪೊಲೀಸರು ನಿರಂತರವಾಗಿ ಸಿದ್ಧತೆ ನಡೆಸುತ್ತಿದ್ದಾರೆ" ಎಂದು ಸೋಮವಾರ Aaj Tak ಡಿಜಿಟಲ್ ವೇದಿಕೆಯ ವಿಡಿಯೊವೊಂದರಲ್ಲಿ ಚೌಹಾಣ್ ಮಾಹಿತಿ ನೀಡಿದ್ದರು.
ಮಂಗಳವಾರ ಪೊಲೀಸರು ಪ್ರತಿಭಟನಾನಿರತ ರೈತರ ಮೇಲೆ ಅಶ್ರುವಾಯು ಶೆಲ್ ಪ್ರಯೋಗಿಸಿದರು. ಆಗ ಅಂಬಾಲಾ ಬಳಿಯ ಶಂಭು ಗಡಿಯಿಂದ ಮಧ್ಯಾಹ್ನ ಸುಮಾರು 1.51ರ ವೇಳೆಗೆ ವರದಿ ಮಾಡುತ್ತಿದ್ದ ಚೌಹಾಣ್, ತನಗೆ ಗುಂಡು ತಗುಲಿತು ಎಂದು ಕ್ಯಾಮೆರಾ ಎದುರೇ ಹೇಳಿದರು.
ತನಗೆ ಗುಂಡೇಟು ತಗುಲಿದೆ ಎಂದು ಹೇಳುವುದಕ್ಕೂ ಕೆಲವೇ ಕ್ಷಣಗಳ ಹಿಂದೆ, "ಇಲ್ಲಿ ಗುಂಡಿನ ದಾಳಿ ಪ್ರಾರಂಭಗೊಂಡಿದ್ದು, ಪರಿಸ್ಥಿತಿ ಕಳವಳಕಾರಿಯಾಗಿದೆ" ಎಂದು ಚೌಹಾಣ್ ವರದಿ ಮಾಡಿದ್ದರು.
Shocking Visuals
— Amock (@Politics_2022_) February 13, 2024
Aaj Tak reporter got bullets while covering farmers protest and crying, "mujhe goli lag gayi"
This is heart wrenching treatment by Modi Govt #FarmersProtest2024#KisanAndolanpic.twitter.com/gqm3Gt0LbF