ಆಪ್ ಸಂಸದ ರಾಘವ್ ಚಡ್ಡಾ ಅವರ ಅಮಾನತನ್ನು ಹಿಂಪಡೆದ ರಾಜ್ಯಸಭೆ
ರಾಘವ್ ಚಡ್ಡಾ (PTI)
ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಜಿವಿಎಲ್ ನರಸಿಂಹ ರಾವ್ ಅವರು ಮಂಡಿಸಿದ ನಿರ್ಣಯದ ಮೇರೆಗೆ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರ ಅಮಾನತನ್ನು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಸೋಮವಾರ ಹಿಂಪಡೆದಿದ್ದಾರೆ.
ಆಪ್ ಸಂಸದ ರಾಘವ್ ಚಡ್ಡಾ ಇಲ್ಲಿಯವರೆಗೆ ಅನುಭವಿಸಿದ ಅಮಾನತು ʼಸಾಕಷ್ಟು ಪ್ರಮಾಣದ ಶಿಕ್ಷೆಯಾಗಿದೆʼ ಎಂದು ಪರಿಗಣಿಸಿ, ಅವರ ಅಮಾನತು ರದ್ದುಗೊಳಿಸುವ ಬಗ್ಗೆ ಸದನವು ಪರಿಗಣಿಸಬಹುದು ಎಂದು ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರು ನಿರ್ಣಯ ಮಂಡಿಸಿದ್ದರು.
ಸಂಸತ್ತಿನಿಂದ ತಮ್ಮ ಅಮಾನತು ಹಿಂತೆಗೆದುಕೊಳ್ಳುವಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಎಎಪಿ ಸಂಸದ ರಾಘವ್ ಚಡ್ಡಾ ಅವರು, ನಿರ್ಧಾರದ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಸುಪ್ರೀಂ ಕೋರ್ಟ್ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
“ಈ 115 ದಿನಗಳ ಅಮಾನತು ಅವಧಿಯಲ್ಲಿ, ನಾನು ನಿಮ್ಮಿಂದ ಬಹಳಷ್ಟು ಪ್ರೀತಿ ಮತ್ತು ಆಶೀರ್ವಾದವನ್ನು ಪಡೆದಿದ್ದೇನೆ. ನನ್ನ ಹೋರಾಟದಲ್ಲಿ ಹೋರಾಡಲು ನೀವೆಲ್ಲರೂ ನನಗೆ ಧೈರ್ಯ ನೀಡಿದ್ದೀರಿ” ಎಂದು ಸಂಸದ ಹೇಳಿದ್ದಾರೆ.
ದಿಲ್ಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ (ತಿದ್ದುಪಡಿ) ಮಸೂದೆ, 2023 ಅನ್ನು ಪರಿಶೀಲಿಸುವ ಉದ್ದೇಶಿತ ಆಯ್ಕೆ ಸಮಿತಿಯಲ್ಲಿ ಸೇರಿಸಲು ನಿರ್ಧರಿಸುವ ಮೊದಲು ಸಂಸದರಿಂದ ಅನುಮತಿ ಪಡೆಯದ ಆರೋಪದ ಮೇಲೆ ಆಗಸ್ಟ್ 11 ರಂದು ಅವರನ್ನು ಸಂಸತ್ತಿನಿಂದ ಅನಿರ್ದಿಷ್ಟವಾಗಿ ಅಮಾನತುಗೊಳಿಸಲಾಗಿತ್ತು.